ತಿರುಪತಿ ತಿಮ್ಮಪ್ಪನಿಗೆ ಪ್ರತಿದಿನ ಮೊದಲ ಆರತಿ ಬೆಳಗುವ ಹಕ್ಕು ಕರ್ನಾಟಕಕ್ಕೆ ಸಿಕ್ಕಿದ್ದು ಹೇಗೆ? ಇಲ್ಲಿದೆ ರೋಚಕ ಇತಿಹಾಸ! – Kannada News | Why is Tirupati Temple First Aarti Performed on Behalf of Karnataka? Know the History

ಬೆಂಗಳೂರು, ಜುಲೈ 13: ಆಂಧ್ರಪ್ರದೇಶದ ತಿರುಮಲದಲ್ಲಿರುವ ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನೆರವೇರಿಸಲಾಗುವ ಅತ್ಯಂತ ಪವಿತ್ರವಾದ ‘ಮೊದಲ ಆರತಿ’ ಸಾಂಪ್ರದಾಯಿಕವಾಗಿ ನಮ್ಮ ಕರ್ನಾಟಕ ರಾಜ್ಯದ ಹೆಸರಿನಲ್ಲೇ ಸಲ್ಲಿಕೆಯಾಗುತ್ತದೆ. ತಿರುಪತಿ ಕ್ಷೇತ್ರಕ್ಕೂ ಕರ್ನಾಟಕಕ್ಕೂ 400 ವರ್ಷಗಳ ಅವಿನಾಭಾವ ಧಾರ್ಮಿಕ ಮತ್ತು ಐತಿಹಾಸಿಕ ನಂಟಿದೆ. ಈ ನಂಟಿನ ಪ್ರತೀಕವಾಗಿ ಸ್ವಾಮಿಯ ಮೊದಲ ಆರತಿ ಕರ್ನಾಟಕದ ಪರವಾಗಿಯೇ ಸಲ್ಲಿಸಲಾಗುತ್ತದೆ.

ಮೈಸೂರು ಮಹಾರಾಜರ ಕೊಡುಗೆ ಮತ್ತು ಐತಿಹಾಸಿಕ ಒಪ್ಪಂದ

ಈ ವಿಶಿಷ್ಟ ಧಾರ್ಮಿಕ ಹಕ್ಕಿನ ಹಿಂದೆ ಮೈಸೂರು ಸಂಸ್ಥಾನದ ಒಡೆಯರ್ ರಾಜವಂಶದ ಭಕ್ತಿ ಮತ್ತು ಅಪೂರ್ವ ಕೊಡುಗೆಯ ಇತಿಹಾಸವಿದೆ. ಮೈಸೂರು ಮಹಾರಾಜರ ಕಾಲದಲ್ಲಿ ತಿರುಮಲ ಶ್ರೀವಾರಿಯ ಗರ್ಭಗುಡಿಯೊಳಗೆ ನಿರಂತರವಾಗಿ ಬೆಳಗುವ ಪವಿತ್ರ ದೀಪಗಳಾದ ಬ್ರಹ್ಮದೀಪ, ಮಹಾರಾಜ ದೀಪ ಹಾಗೂ ಅಖಂಡ ದೀಪಗಳಿಗಾಗಿ ಪ್ರತಿದಿನ 5 ಕೆಜಿ ಪರಿಶುದ್ಧವಾದ ತುಪ್ಪವನ್ನು ಕಾಣಿಕೆಯಾಗಿ ನೀಡುವ ಅದ್ಭುತ ಸಂಪ್ರದಾಯವನ್ನು ಆರಂಭಿಸಲಾಗಿತ್ತು.

ಮೈಸೂರು ಸಂಸ್ಥಾನವು ನೀಡಿದ ಈ ಸುದೀರ್ಘ ಧಾರ್ಮಿಕ ಮತ್ತು ಆರ್ಥಿಕ ಕೊಡುಗೆಗಳ ಗೌರವಾರ್ಥವಾಗಿ, ಪ್ರತಿದಿನ ಬೆಳಿಗ್ಗೆ ಸುಪ್ರಭಾತ ಸೇವೆಯ ನಂತರ ನೆರವೇರುವ ದಿನದ ಮೊದಲ ಕರ್ಪೂರದ ಆರತಿಯನ್ನು ಸಾಂಪ್ರದಾಯಿಕವಾಗಿ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಸಲ್ಲಿಸುವ ಐತಿಹಾಸಿಕ ಹಕ್ಕನ್ನು ದೇವಸ್ಥಾನದ ಆಡಳಿತ ಮಂಡಳಿ ನೀಡಿದೆ.

ವಿಜಯನಗರ ಸಾಮ್ರಾಜ್ಯ ಮತ್ತು ಪ್ರೋಟೋಕಾಲ್ ಇತಿಹಾಸ

ಮೈಸೂರು ಒಡೆಯರಿಗಿಂತ ಮುಂಚೆ, 14 ರಿಂದ 17 ನೇ ಶತಮಾನದವರೆಗೆ ಆಳಿದ ವಿಜಯನಗರದ ಅರಸರಾದ ಶ್ರೀಕೃಷ್ಣದೇವರಾಯ, ಅಚ್ಯುತರಾಯ ಮುಂತಾದವರು ತಿರುಪತಿ ತಿಮ್ಮಪ್ಪನಿಗೆ ಅಸಂಖ್ಯಾತ ವಜ್ರ ವೈಢೂರ್ಯ ಹಾಗೂ ಬಂಗಾರದ ಕಿರೀಟಗಳನ್ನು ಕಾಣಿಕೆಯಾಗಿ ನೀಡಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರು ಸಂಸ್ಥಾನವು ಈ ಧಾರ್ಮಿಕ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಬಂದಿತ್ತು.

ಇದನ್ನೂ ಓದಿ ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಇನ್ಮುಂದೆ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ: ಸಿಎಂ ಮಹತ್ವದ ಘೋಷಣೆ!

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಭಾಷಾವಾರು ಪ್ರಾಂತ್ಯಗಳು ವಿಂಗಡಣೆಯಾದ ಮೇಲೂ ಈ ಐತಿಹಾಸಿಕ ಹಕ್ಕನ್ನು ಹಾಗೇ ಉಳಿಸಿಕೊಳ್ಳಲಾಯಿತು. ತಿರುಮಲ ಕ್ಷೇತ್ರವು ಆಂಧ್ರಪ್ರದೇಶದ ಭೌಗೋಳಿಕ ವ್ಯಾಪ್ತಿಗೆ ಸೇರಿದರೂ, ಪ್ರತಿದಿನ ಬೆಳಿಗ್ಗೆ ಕರ್ನಾಟಕ ಸರ್ಕಾರದ ವತಿಯಿಂದ ತಿರುಪತಿಯಲ್ಲಿ ನಿಯೋಜನೆಗೊಂಡಿರುವ ವಿಶೇಷ ಅಧಿಕಾರಿಯೊಬ್ಬರು ಅಲ್ಲಿ ಹಾಜರಿದ್ದು ಈ ಪ್ರಸಾದ ಮತ್ತು ಗೌರವವನ್ನು ಸ್ವೀಕರಿಸುತ್ತಾರೆ. ಇದೀಗ ಸಿಎಂ ಡಿ.ಕೆ ಶಿವಕುಮಾರ್ ಆದೇಶದಂತೆ ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *