ತುಂಗಭದ್ರಾ ಜಲಾಶಯದ ಮಣ್ಣು ಲೂಟಿ: ಟಿಪ್ಪರ್ ತಡೆದ ಬಿಜೆಪಿ MLCಗೆ ‘ನಾನೇ ದಂಡ ಕಟ್ಟುತ್ತೇನೆಂದ’ ಸಿಪಿಐ – Kannada News | Tungabhadra Reservoir Soil Loot: CPI Tells BJP MLC Who Stopped Tipper, I’ll Pay the Fine Myself

ಕೊಪ್ಪಳ, ಜುಲೈ 30: ತೀವ್ರ ಬರಗಾಲದ ನಡುವೆ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ (Illegal soil transportation) ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೊಪ್ಪಳ (koppal) ತಾಲೂಕಿನ ಕರ್ಕಿಹಳ್ಳಿ ಸಮೀಪ ತಡರಾತ್ರಿ ಸ್ವತಃ ಸ್ಥಳಕ್ಕೆ ತೆರಳಿದ ಬಿಜೆಪಿ ಎಂಎಲ್​​ಸಿ ಹೇಮಲತಾ ನಾಯಕ್, ಮಣ್ಣು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ತಡೆಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಆದರೆ ‘ಮಣ್ಣು ನಮ್ಮ ಜಮೀನಿಗೆ ಬೇಕು ಹಾಗೂ ದಂಡವನ್ನು ನಾನು ಕಟ್ಟುತ್ತೇನೆ’ ಎಂದಿರುವ ಪೊಲೀಸ್ ಅಧಿಕಾರಿಯ ಅದೊಂದು ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸುವಂತೆ ಗೃಹ ಸಚಿವರಿಗೆ ಒತ್ತಾಯಿಸಲಾಗಿದೆ.

ತಡರಾತ್ರಿ ದಾಳಿ: ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಟಿಪ್ಪರ್​​ಗಳನ್ನ ತಡೆದ ಬಿಜೆಪಿ ಎಂಎಲ್​​ಸಿ

ಸದ್ಯ ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನೆಲೆ ಜನರು ನೀರಿಗಾಗಿ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಸಮೀಪ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ತಡರಾತ್ರಿ ದಾಳಿ ನಡೆಸುವ ಮೂಲಕ ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಹಲವು ಟಿಪ್ಪರ್‌ಗಳನ್ನು ತಡೆದಿದ್ದಾರೆ.

ಮಣ್ಣು ನಮ್ಮ ಜಮೀನಿಗೆ ಬೇಕು ಎಂದ ಸಿಪಿಐ 

‘ಮಣ್ಣು ಎಲ್ಲಿಂದ ಸಾಗಿಸಲಾಗುತ್ತಿದೆ’ ಎಂದು ಚಾಲಕರನ್ನು ಪ್ರಶ್ನಿಸಿದ್ದಾರೆ. ಬಳಿಕ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ ಹೇಮಲತಾ ನಾಯಕ್, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಜಯಪ್ರಕಾಶ್​​ರೊಂದಿಗೆ ಫೋನ್​​ನಲ್ಲಿ ಮಾತನಾಡಿದ್ದಾರೆ. ಮಾತುಕತೆ ವೇಳೆ ‘ಮಣ್ಣು ನಮ್ಮ ಜಮೀನಿಗೆ ಬೇಕು ಹಾಗೂ ದಂಡವನ್ನು ನಾನು ಕಟ್ಟುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೂಡಲೇ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಮಲತಾ ನಾಯಕ್ ಒತ್ತಾಯಿಸಿದ್ದಾರೆ.

ಊಟ ಮಾಡುವುದಕ್ಕೂ ಕಷ್ಟವಾಗುತ್ತಿದೆ: ಸಾರ್ವಜನಿಕರು ಬೇಸರು

ಇನ್ನು ಇದೇ ವೇಳೆ ಸಾರ್ವಜನಿಕರು ಕೂಡ ಅಕ್ರಮ ಮಣ್ಣು ಸಾಗಾಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾತ್ರಿಯಿಡೀ ಟಿಪ್ಪರ್‌ಗಳು ಓಡಾಡುತ್ತವೆ. ‘ನೆಮ್ಮದಿಯಾಗಿ ಬದುಕುವುದಲ್ಲ, ಊಟ ಮಾಡುವುದಕ್ಕೂ ಕಷ್ಟವಾಗುತ್ತಿದೆ. ಅಷ್ಟೊಂದು ವಾಹನಗಳು ಸಂಚರಿಸುತ್ತವೆ’ ಎಂದು ಅಳಲು ತೋಡಿಕೊಂಡರು.

ಸಿಪಿಐ ವಿರುದ್ಧ ಎಸ್​ಪಿ ತನಿಖೆಗೆ ಸೂಚನೆ

ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದೆ ಎಂದು ಆರೋಪಿಸಿರುವ ಹೇಮಲತಾ ನಾಯಕ್, ‘ತುಂಗಭದ್ರಾ ಹಿನ್ನೀರಿನ ಪ್ರದೇಶದ ಸಂಪತ್ತನ್ನು ರಕ್ಷಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಇತ್ತ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ವಿರುದ್ಧ ಎಸ್​ಪಿ ತನಿಖೆಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು

ಇನ್ನು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮಣ್ಣು ಸಾಗಾಟ ಗೊತ್ತಿದ್ದರು ಅಧಿಕಾರಿಗಳು ಇಷ್ಟು ದಿನ ಸುಮ್ಮನಿದ್ದರಾ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ಗಣಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕೂಳಿತಿದ್ದು ಏಕೆ? ಪೊಲೀಸ್ ಅಧಿಕಾರಿ ಜಯಪ್ರಕಾಶ್​​ಗೂ ದಂಧೆಕೋರರಿಗೂ ಏನು ಸಂಬಂಧ ಎನ್ನುವುದು ತಿನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *