ಇತ್ತೀಚಿನ ದಿನಗಳಲ್ಲಿ ಹಲವರಿಗೆ ಯಾವುದೇ ರೀತಿಯ ಕೆಲಸ ಮಾಡದಿದ್ದರೂ ಕೂಡ ಸುಸ್ತಾಗುವುದನ್ನು (Fatigue) ನೋಡಿರಬಹುದು. ಯಾವುದೇ ರೀತಿಯ ದೇಹ ದಂಡಿಸುವ ಕೆಲಸ ಮಾಡದಿದ್ದರೂ ಕೂಡ ದಣಿವು, ದುರ್ಬಲತೆ ಮತ್ತು ನಿಷ್ಕ್ರಿಯತೆ ಕಂಡುಬರುತ್ತದೆ. ಆದರೆ ಈ ರೀತಿಯಾಗುವುದನ್ನು ಯಾರೂ ಕೂಡ ಅಷ್ಟಾಗಿ ಗಣನೆಗೆ ತೆಗದುಕೊಳ್ಳುವುದಿಲ್ಲ. ಸಾಮಾನ್ಯ ಸಮಸ್ಯೆಗಳಲ್ಲಿ ಒಂದೆಂದು ನಿರ್ಲಕ್ಷಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳುತ್ತಾರೆ. ಏಕೆಂದರೆ ಈ ರೀತಿ ಕಾರಣವಿಲ್ಲದೆ ದಣಿವಾಗುವುದಕ್ಕೆ ಬಹಳಷ್ಟು ಕಾರಣಗಳಿರಬಹುದು ಅವುಗಳಲ್ಲಿ ಪ್ರಮುಖವಾದದ್ದು ದೇಹದಲ್ಲಿ ಅಗತ್ಯವಿರುವ ವಿಟಮಿನ್ ಕೊರತೆಯಾಗಿದೆ.
ದಣಿವಿಗೆ ಕಾರಣವಾಗುವ ಲಕ್ಷಣಗಳು:
ನಿರಂತರವಾಗಿ ದೌರ್ಬಲ್ಯ, ಕೆಲಸ ಮಾಡಲು ಆಸಕ್ತಿ ಕಡಿಮೆ, ತಲೆಸುತ್ತು, ಸ್ನಾಯು ನೋವು, ಗಮನ ಕೇಂದ್ರೀಕರಣದಲ್ಲಿ ತೊಂದರೆ ಮತ್ತು ಬೇಗನೆ ದಣಿವು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣಗಳು. ಕೆಲವರಿಗೆ ಮೆಟ್ಟಿಲೇರುವಾಗ ಉಸಿರಾಟ ತೊಂದರೆ, ಹೃದಯ ಬಡಿತ ಹೆಚ್ಚಾಗುವುದು ಅಥವಾ ತಲೆ ಭಾರವಾಗಿರುವ ಅನುಭವವೂ ಕಾಣಬಹುದು.
ಇದನ್ನೂ ಓದಿ: ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳ ವರದಿ ನಾರ್ಮಲ್ ಇದ್ದರೂ ದಿನಪೂರ್ತಿ ದಣಿವೇ? ಈ 4 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಗಮನ
ಯಾವ ವಿಟಮಿನ್ ಮುಖ್ಯ?
ದಣಿವನ್ನು ಕಡಿಮೆ ಮಾಡಿಕೊಳ್ಳಲು ವಿಟಮಿನ್ ಬಿ12 ಅತ್ಯಂತ ಮುಖ್ಯವಾಗಿದೆ. ಇದು ರಕ್ತದ ಕೆಂಪು ರಕ್ತಕಣಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಮತ್ತು ನರಮಂಡಲದ ಕಾರ್ಯವನ್ನು ಸರಾಗವಾಗಿ ನಡೆಸುತ್ತದೆ. ಈ ವಿಟಮಿನ್ ಕೊರತೆಯಿಂದ ದೇಹದಲ್ಲಿ ಆಮ್ಲಜನಕ ಸರಬರಾಜು ಕಡಿಮೆಯಾಗುತ್ತದೆ, ಇದರಿಂದ ದಣಿವು ಹೆಚ್ಚಾಗುತ್ತದೆ. ಈ ವಿಟಮಿನ್ ಬಿ12ನ್ನು ಸರಿಯಾಗಿ ಪಡೆಯಲು ಹಾಲು, ಮೊಸರು, ಪನೀರ್, ಮೊಟ್ಟೆ, ಮೀನು ಮತ್ತು ಮಾಂಸಾಹಾರವನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಸಸ್ಯಾಹಾರಿಗಳು ಫೋರ್ಟ್‌ಫೈಡ್ ಆಹಾರಗಳನ್ನು ಆಯ್ಕೆ ಮಾಡಬಹುದು. ಕೆಲ ಸಂದರ್ಭಗಳಲ್ಲಿ ವೈದ್ಯರು ಸಪ್ಲಿಮೆಂಟ್ ಅಥವಾ ಇಂಜೆಕ್ಷನ್ ಸಲಹೆ ನೀಡಬಹುದು, ಆದರೆ ವೈದ್ಯರ ಸಲಹೆಯಿಲ್ಲದೆ ಅವನ್ನು ಬಳಸಬಾರದು.
ಜೀವನಶೈಲಿಯೂ ಮುಖ್ಯ:
ಸರಿಯಾದ ನಿದ್ರೆ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿಯಂತ್ರಣ ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಹೆಚ್ಚು ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ದಿನದ ನಡುವೆ ವಿರಾಮ ತೆಗೆದುಕೊಳ್ಳುವುದು ಸಹ ಉಪಯುಕ್ತ. ನಿರಂತರ ದಣಿವು ಕೇವಲ ವಿಶ್ರಾಂತಿ ಕೊರತೆಯ ಕಾರಣವಲ್ಲ, ಅದು ವಿಟಮಿನ್ ಕೊರತೆಯ ಸೂಚನೆಯಾಗಿರಬಹುದು. ಹಾಗಾಗಿ ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
