ತುಳುನಾಡಿನಲ್ಲೇ ದೈವಕ್ಕೆ ಅಪಚಾರ? ಕ್ರಿಶ್ಚಿಯನ್ ಹುಡುಗನಿಂದ ದೈವ ನರ್ತನ ಆರೋಪ!

ತುಳುನಾಡಿನಲ್ಲೇ ದೈವಕ್ಕೆ ಅಪಚಾರ? ಕ್ರಿಶ್ಚಿಯನ್ ಹುಡುಗನಿಂದ ದೈವ ನರ್ತನ ಆರೋಪ!

ಮಂಗಳೂರು, ಮಾರ್ಚ್​ 15: ತುಳುನಾಡಿನ ಪ್ರಸಿದ್ಧ ದೈವಾರಾಧನೆಯ ದೈವ ನರ್ತನ (Daiva Nartana)ಇದೀಗ ಭಾರೀ ವಿವಾದದಕ್ಕೆ ಕಾರಣವಾಗಿದೆ. ಮಂಗಳೂರಿನ ಪ್ರಸಿದ್ಧ ದೈವಸ್ಥಾನದಲ್ಲಿ ನಡೆದ ನೇಮೋತ್ಸವದ ವೇಳೆ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ತುಳುನಾಡಿನ ದೈವಾರಾಧನೆ ಪರಂಪರೆಯ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ತಂದೆ ಹಿಂದೂ, ತಾಯಿ ಕ್ರಿಶ್ಚಿಯನ್!

ಜನವರಿ 31ರಂದು ಮಂಗಳೂರಿನ ಪ್ರಸಿದ್ಧ ದೈವಕ್ಷೇತ್ರದಲ್ಲಿ ಶ್ರೀ ಜಾರಂದಾಯ ಹಾಗೂ ಬಂಟ ದೈವಕ್ಕೆ ನೇಮೋತ್ಸವ ನಡೆದಿತ್ತು. ಸಂಪ್ರದಾಯದಂತೆ ದೈವ ನರ್ತನ ಸೇವೆಯನ್ನು ನಲಿಕೆ, ಪರವ ಹಾಗೂ ಪಂಬದ ಸಮುದಾಯದವರು ಮಾತ್ರ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಈ ಬಾರಿ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ನರ್ತನ ಮಾಡಿಸಲಾಗಿದೆ ಎಂದು ಪಂಬದ ಸಮುದಾಯದ ಸಂಶೋಧಕಿ‌ ಡಾ.ರತಿ ಆರೋಪಿಸಿದ್ದಾರೆ.

ಜಾರಂದಾಯ ದೈವದ ನರ್ತನವನ್ನು ಪ್ರಸಿದ್ಧ ದೈವ ನರ್ತಕ ಚಿಪ್ಪಾರು ಗಣೇಶ್ ಪಂಬದ ನೆರವೇರಿಸಿದ್ದಾರೆ. ಇದೇ ವೇಳೆ ಬಂಟ ದೈವದ ನರ್ತನ ಸೇವೆಯನ್ನು ಕ್ರೈಸ್ತ ಧರ್ಮದ ಯುವಕನಿಗೆ ನೀಡಲಾಗಿದೆ ಎಂಬ ಆರೋಪ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನರ್ತನ ಮಾಡಿದ ಯುವಕನ ತಂದೆ ಪಂಬದ ಸಮುದಾಯದವರಾಗಿದ್ದು, ತಾಯಿ ಕ್ರೈಸ್ತ ಧರ್ಮದವರು ಎಂಬ ವಿಚಾರ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಸಂಶೋಧಕಿ ಮಾಡಿದ ಆರೋಪಗಳೇನು?

ಈ ವಿಚಾರವಾಗಿ ಸಂಶೋಧಕಿ ಡಾ. ರತಿ ಟಿವಿ9 ಜೊತೆ ಮಾತನಾಡಿ ಜಾರಂದಾಯ ದೈವಕ್ಕೆ ಗಣೇಶ್ ಪಂಬದ ನೇಮ ಕಟ್ಟಿದರೂ, ಬಂಟ ದೈವಕ್ಕೆ ಕ್ರೈಸ್ತ ಯುವಕನಿಂದ ನರ್ತನ ಮಾಡಿಸಲಾಗಿದೆ. ಆ ಯುವಕನ ತಂದೆ ಪಂಬದ ಸಮುದಾಯದವರಾದರೂ ತಾಯಿ ಕ್ರೈಸ್ತ ಧರ್ಮಕ್ಕೆ ಸೇರಿದವರು. ನಮ್ಮ ಪರಂಪರೆಯ ಪ್ರಕಾರ ಬೇರೆ ಧರ್ಮ ಅಥವಾ ಸಮುದಾಯದವರನ್ನು ದೈವ ನರ್ತನ ಪ್ರಕ್ರಿಯೆಯಲ್ಲಿ ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಇದರಿಂದ ದೊಡ್ಡ ಅಪಚಾರವಾಗಿದೆ ಎಂದ ಸಂಶೋಧಕಿ, ದೈವಸ್ಥಾನದ ಆಡಳಿತ ಮಂಡಳಿಗೂ ಈ ವಿಚಾರ ಮೊದಲಿಗೆ ತಿಳಿದಿರಲಿಲ್ಲ. ಯಾರು‌ ಕೂಡಾ ಇದನ್ನು ನಿರೀಕ್ಷಿಸಿರಲೂ ಇಲ್ಲ. ಗಣೇಶ ಪಂಬದ ನಂಬಿಕೆ ದ್ರೋಹ ಮಾಡಿದ್ದಾರೆ. ನಮ್ಮ ಸಮುದಾಯದಲ್ಲಿ ಪರಂಪರೆಯ ಪಂಬದರು ತುಂಬಾ ಜನ ಇದ್ದಾರೆ. ಅಂತವರಿಗೆ ಇದು ತುಂಬಾ ನೋವಾಗಿದೆ.ಇದನ್ನು‌ ಸಮಾಜದ ಮುಂದೆ ಇಡುತ್ತಿದ್ದೇವೆ. ತೀರ್ಮಾನ ಜನರಿಗೆ ಬಿಟ್ಟಿದ್ದು. ದೈವ ನರ್ತಕನ ಆವೇಷ ನೋಡಿದ್ರೆ ನೇಮ‌ ಎಂದು ಅನ್ನಿಸಲ್ಲ. ಕ್ರೈಸ್ತ ಹುಡುಗ ಕುಣಿಯೋದು ನೋಡಿ ನಮಗೆ ಇದು ನಾಟಕವೇನೋ ಎನ್ನಿಸಿತು. ನಮ್ಮದು ಅಳಿಯಕಟ್ಟು ಆದ್ದರಿಂದ ನಮ್ಮಲ್ಲಿ ಬೇರೆ ಜಾತಿ, ಧರ್ಮದವರು ಬಂದು ನೇಮ‌ ಕಟ್ಟುವಂತಿಲ್ಲ. ನಾವು ಇದನ್ನು ಪ್ರಶ್ನೆ ಮಾಡಿದಾಗ ನಾವು ಯಾರನ್ನು ಬೇಕಾದರೂ ಕರ್ಕೊಂಡು ಬಂದು ದೈವ ಕಟ್ಟಿಸುತ್ತೇವೆ ಎಂದು ಉತ್ತರ ಕೊಟ್ಟಿದ್ದಾರೆ. ಹೆಂಗಸಾದ ನಿನಗೆ ಬಣ್ಣ ಹಚ್ಚಿ ದೈವ ನರ್ತನ‌ ಮಾಡಲು‌ ಆಗುತ್ತಾ ಎಂದು ನನ್ನನ್ನೇ ಪ್ರಶ್ನಿಸಿದ್ದಾರೆ ಎಂದು ಹಲವು ಆರೋಪಗಳನ್ನು ಮಾಡಿದ್ದಾರೆ.

ಇದನ್ನೂ ಓದಿ ತುಳು ಸಂಸ್ಕೃತಿಯಲ್ಲಿ‌ ಮಾಯವಾಗುವುದು ಎಂದರೆ ಸಾಯುವುದಲ್ಲ, ಹಾಗಿದ್ದರೆ ಮಾಯವಾದವರು ಏನಾಗುತ್ತಾರೆ? ಇಲ್ಲಿದೆ ನೋಡಿ ಮಾಹಿತಿ

ಘಟನೆ ಹೊರಬಿದ್ದ ನಂತರ ತುಳುನಾಡಿನಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ದೈವಾರಾಧನೆ ಸಂಪ್ರದಾಯದ ಬಗ್ಗೆ ಹೊಸ ವಿವಾದ ಎದ್ದಿದೆ. ಇದೀಗ ಈ ವಿಷಯದ ಅಂತಿಮ ತೀರ್ಮಾನವನ್ನು ಸಮಾಜದ ಮುಂದೆ ಇಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *