ತೆಕ್ಕಲಕೋಟೆ ಬಳಿ ಉತ್ಖನನದಲ್ಲಿ ಸಿಕ್ತು ಒಂದರ ಪಕ್ಕದಲ್ಲೊಂದು 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು!
ಬಳ್ಳಾರಿ, ಫೆಬ್ರುವರಿ 08: ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ (Excavation) ವೇಳೆ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಈ ಉತ್ಖನನ ಕಾರ್ಯವನ್ನು ನಡೆಸುತ್ತಿದೆ. ಕಳೆದ ವಾರ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಪತ್ತೆಯಾಗಿದ್ದು, ನಂತರ ಮತ್ತಷ್ಟು ಆಳವಾಗಿ ಅಗೆದಾಗ ಸುಮಾರು 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಒಂದರ ಪಕ್ಕದಲ್ಲೊಂದು ಪತ್ತೆಯಾಗಿವೆ.
ಪಳೆಯುಳಿಕೆ ಸುತ್ತ ಮುತ್ತ ಮಡಿಕೆ ಚೂರುಗಳು ಪತ್ತೆ
ಅಸ್ಥಿಪಂಜರಗಳು ಯಾವುದೇ ರೀತಿಯಲ್ಲಿ ಹಾಳಾಗದೆ ಉತ್ತಮ ಸ್ಥಿತಿಯಲ್ಲಿ ದೊರೆತಿದ್ದು, ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿದ ಪದ್ಧತಿಯ ಸ್ಪಷ್ಟ ಕುರುಹುಗಳು ಕಂಡುಬಂದಿವೆ. ಪಳೆಯುಳಿಕೆಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಹಾಗೂ ಮಾನವ ಆಯುಧ ಬಳಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಆಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ Ballari: ತೆಕ್ಕಲಕೋಟೆ ಬಳಿ ಉತ್ಖನನದ ವೇಳೆ ಸಾವಿರಾರು ವರ್ಷಗಳ ಹಿಂದಿನ ಅಸ್ಥಿಪಂಜರ ಪತ್ತೆ
ಕಾರ್ಬನ್ ಡೇಟಿಂಗ್‌ಗೆ ನಿರ್ಧಾರ
ಪತ್ತೆಯಾದ ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಆಗಿರಬಹುದೆಂದು ಹೇಳಲಾಗಿದ್ದು, ನಿಖರ ಕಾಲಮಾನದ ನಿರ್ಧಾರಕ್ಕಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಉತ್ಖನನ ಕಾರ್ಯದ ನಿರ್ದೇಶಕರಾದ ಪರಂಪರೆ ಇಲಾಖೆ ಉಪ ನಿರ್ದೇಶಕ ಆರ್. ಶೇಜೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಕ್ಕಲಕೋಟೆ ಪ್ರದೇಶವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
