
ಹೈದರಾಬಾದ್, ಜೂನ್ 2: ಜನ ಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಹೇಳಿಕೆಗಳು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. “ತೆಲಂಗಾಣದಲ್ಲಿ ಕಾಲಿಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ನವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ತೆಲಂಗಾಣ ನಿಮ್ಮ ಕುಟುಂಬದ ಭೂಮಿಯೇ? ತೆಲಂಗಾಣದಲ್ಲೂ ಜನಸೇನಾ ಪಕ್ಷ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲಿದೆ. ನಾವು ಮುಂದಿನ ಚುನಾವಣೆಯಲ್ಲಿ ತೆಲಂಗಾಣದಲ್ಲೂ ಸ್ಪರ್ಧಿಸುತ್ತೇವೆ. ನಾನೇ ತೆಲಂಗಾಣದಲ್ಲಿ ಸಂಚಾರ ಮಾಡಿ ಜನರನ್ನು ತಲುಪುತ್ತೇನೆ” ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ಜನ ಸೈನಿಕರು ಹೊಡೆತ ಮತ್ತು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದಕ್ಷಿಣ ಭಾರತಕ್ಕೆ ಬಂದು ಸ್ಪರ್ಧಿಸುವಾಗ ನಾವು ತೆಲಂಗಾಣದಲ್ಲಿ ಏಕೆ ಸ್ಪರ್ಧಿಸಬಾರದು? ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ. “ನನ್ನ ವಿರುದ್ಧ ಮೊದಲ ಪ್ರಕರಣ ತೆಲಂಗಾಣದಲ್ಲಿ ದಾಖಲಾಗಿತ್ತು. ನಾಲಿಗೆ ಕತ್ತರಿಸುವ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾನು ಹೇಳುತ್ತಿದ್ದೇನೆ. ಇಲ್ಲಿಗೆ ಯಾರೇ ಬಂದರೂ ಬನ್ನಿ, ನಾನು ನನ್ನ ನಾಲಿಗೆ ತೋರಿಸುತ್ತೇನೆ” ಎಂದು ಅವರು ಸವಾಲು ಹಾಕಿದ್ದಾರೆ. ಜನಸೇನಾ ತೆಲಂಗಾಣದ ಹೃದಯಭಾಗದಲ್ಲಿ ಹುಟ್ಟಿಕೊಂಡಿದ್ದು, ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನಸೇನಾ ಸೈನಿಕರಿದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ