ಹೈದರಾಬಾದ್, ಫೆಬ್ರವರಿ 23: ತೆಲಂಗಾಣದ ನಾಗರ್ಕರ್ನೂಲ್‌ನಲ್ಲಿ ನಡೆದ ಕುಮ್ಮೇರ ಜಾತ್ರೆಯ ಸಂದರ್ಭದಲ್ಲಿ ಜಾತಿ ಘರ್ಷಣೆಯಲ್ಲಿ ಒಂದು ಕುಟುಂಬದ ಮೇಲೆ ಪುರುಷರ ಗುಂಪೊಂದು ದಾಳಿ ನಡೆಸಿದೆ. ಈ ಗಲಾಟೆಯಲ್ಲಿ 2 ತಿಂಗಳ ಮಗುವೂ ಸಾವನ್ನಪ್ಪಿದೆ. ಕೆಳ ಜಾತಿಯ ಮಹಿಳೆಯರ ಕೂದಲನ್ನು ಎಳೆದು ರಾಡ್‌ಗಳಿಂದ ಹೊಡೆಯಲಾಗಿದೆ. ಜಾತ್ರೆಗೆ ದೇವಾಲಯದೊಳಕ್ಕೆ ಪ್ರವೇಶಿಸಲು ಕೆಳ ಜಾತಿಯ ಕುಟುಂಬಸ್ಥರು 100 ರೂ. ನೀಡಲು ನಿರಾಕರಿಸಿದಾಗ ವಾಗ್ವಾದ ಪ್ರಾರಂಭವಾಯಿತು. ಇದೇ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿತು.
ಇದಾದ ನಂತರ ಆ ಕುಟುಂಬದ ಸದಸ್ಯರು ಪೊಲೀಸ್ ದೂರು ದಾಖಲಿಸಿದರು. ತಮ್ಮನ್ನು “ಕೆಳಜಾತಿ” ಎಂದು ಕರೆದು ಹೀಯಾಳಿಸಿದ್ದಾರೆ. ದೇವಾಲಯಕ್ಕೆ ಪ್ರವೇಶ ಉಚಿತವಾದ್ದರಿಂದ ಹಣ ನೀಡಲು ನಾವು ನಿರಾಕರಿಸಿದಾಗ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಮುಂದೆ ಮೂತ್ರ ವಿಸರ್ಜನೆ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಗಲಾಟೆಯ ವೇಳೆ ಆ ಮಹಿಳೆಯರಲ್ಲಿ ಒಬ್ಬರು ತನ್ನ 2 ತಿಂಗಳ ಮಗುವನ್ನು ಗಲಾಟೆ ಮಾಡುವವರ ಪಾದಗಳ ಮೇಲೆ ಇಟ್ಟು, ತನ್ನ ಗಂಡನನ್ನು ಹೊಡೆಯದಂತೆ ಬೇಡಿಕೊಂಡಾಗ ಆತ ಎರಡು ತಿಂಗಳ ಮಗುವನ್ನು ತುಳಿದಿದ್ದಾನೆ. ತಕ್ಷಣ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಿ ಮೂರು ದಿನಗಳ ನಂತರ ಆ ಮಗು ಮೃತಪಟ್ಟಿತು.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆರೋಪಿಗಳು ಮಹಿಳೆಯರ ಕೂದಲನ್ನು ಎಳೆದು ಹೊರಗೆ ತಳ್ಳಿದರು. ತೆಂಗಿನಕಾಯಿ ಒಡೆಯಲು ಬಳಸಿದ್ದ ಕಬ್ಬಿಣದ ರಾಡ್ ಬಳಸಿ ನಾಲ್ವರು ಜನರು ಹಲ್ಲೆ ನಡೆಸಿದರು. ಈ ವೇಳೆ ಆ ಕುಟುಂಬದವರು ಹಾಕಿದ್ದ ಚಿನ್ನದ ಕಿವಿಯೋಲೆಗಳು, ಬೆಳ್ಳಿ ಬಳೆಗಳು ಮತ್ತು ಫೋನ್ ಸೇರಿದಂತೆ ಅವರ ವಸ್ತುಗಳನ್ನು ಕಸಿದುಕೊಳ್ಳಲಾಗಿದೆ ಎನ್ನಲಾಗಿದೆ. ಮೃತ ಶಿಶುವಿನ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಅದರ ಆಧಾರದ ಮೇಲೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
