
ಹೈದರಾಬಾದ್, ಏಪ್ರಿಲ್ 10: ತೆಲಂಗಾಣ ಸರ್ಕಾರವು (Telangana Government) ಈ ವರ್ಷ ಮಹಿಳೆಯರಿಗೆ ಉಚಿತ ಸೀರೆ ವಿತರಣಾ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಾರಿ ಸೀರೆಗಳಿಗೆ ಹೊಸ ಬಣ್ಣ ಮತ್ತು ವಿನ್ಯಾಸವನ್ನು ಪರಿಚಯಿಸುತ್ತಿದೆ. ತೆಲಂಗಾಣ ಸರ್ಕಾರವು ಹಿಂದಿನ ಬಾರಿ ವಿತರಿಸಲಾದ ನೀಲಿ ಸೀರೆಗಳ ಬದಲು ಗಿಳಿ ಹಸಿರು ಸೀರೆಗೆ ಕೆಂಪು ಜರಿ ಇರುವ ಸೀರೆಗಳನ್ನು ನೀಡಲು ನಿರ್ಧರಿಸಿದೆ. ಈ ಯೋಜನೆಯಲ್ಲಿ ನವೀಕರಿಸಿದ ವಿನ್ಯಾಸಗಳನ್ನು ಪರಿಚಯಿಸಲು ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣ ಸರ್ಕಾರ 450 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಸೀರೆಗಳನ್ನು ಉತ್ಪಾದಿಸುವ ಆದೇಶವನ್ನು ಟೆಸ್ಕೊಗೆ ನೀಡಿದೆ. ಕಳೆದ ವರ್ಷ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯಂದು ನವೆಂಬರ್ 19ರಂದು ಸರ್ಕಾರ ಸುಮಾರು 86 ಲಕ್ಷ ಸೀರೆಗಳನ್ನು ವಿತರಿಸಿತ್ತು. ಪ್ರಸ್ತುತ ಸರ್ಕಾರ ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಲು ಮತ್ತು ಈ ವರ್ಷ ಅದೇ ದಿನಾಂಕದಂದು ಮತ್ತೆ ಸೀರೆಗಳನ್ನು ವಿತರಿಸಲು ನಿರ್ಧರಿಸಿದೆ.
ಇದನ್ನೂ ಓದಿ: ತೆಲಂಗಾಣದ ರಾಜಭವನವನ್ನು ಲೋಕ ಭವನ ಎಂದು ಮರುನಾಮಕರಣ
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಒಂದೇ ಬಣ್ಣವನ್ನು ಕಾಯ್ದುಕೊಳ್ಳುವ ಬದಲು ಪ್ರತಿ ವರ್ಷ ಬೇರೆ ಬೇರೆ ವಿನ್ಯಾಸ ಮತ್ತು ಬಣ್ಣದ ಸೀರೆಗಳನ್ನು ವಿತರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಇದರ ಆಧಾರದ ಮೇಲೆ ಈ ಬಾರಿ ಅಧಿಕಾರಿಗಳು ಗಿಳಿ ಹಸಿರು ಬಣ್ಣದ ಸೀರೆಯನ್ನು ನೀಡಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನವೆಂಬರ್ 19ರಂದು ಇಂದಿರಾ ಗಾಂಧಿ ಜಯಂತಿಯಂದು ಈ ಸೀರೆ ವಿತರಣಾ ಯೋಜನೆಯನ್ನು ತಂದಿತು. ಇದರ ಭಾಗವಾಗಿ, ಕಳೆದ ವರ್ಷ ರಾಜ್ಯದಲ್ಲಿ ಸುಮಾರು 86 ಲಕ್ಷ ಜನರಿಗೆ ಸೀರೆಗಳನ್ನು ವಿತರಿಸಲಾಯಿತು. ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಸೀರೆಗಳನ್ನು ಏಕಕಾಲದಲ್ಲಿ ವಿತರಿಸಬೇಕು ಎಂದು ಸರ್ಕಾರ ಸೂಚಿಸಿದೆ. ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಿ ನವೆಂಬರ್ನಲ್ಲಿ ಇಂದಿರಾ ಗಾಂಧಿ ಜಯಂತಿಯಂದು ವಿತರಿಸಲು ಸರ್ಕಾರ ಆದೇಶಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ