ತೆಲುಗು ಹೀರೋಗಳ ನೋಡಿ ಕಲಿಯಬೇಕಿದೆ ಕನ್ನಡದ ನಟರು

ತೆಲುಗು ಹೀರೋಗಳ ನೋಡಿ ಕಲಿಯಬೇಕಿದೆ ಕನ್ನಡದ ನಟರು

ಕನ್ನಡದಲ್ಲಿ ಕೆಲವು ಅದ್ಭುತವಾದ ನಟರುಗಳಿದ್ದಾರೆ. ಪ್ರತಿಭೆಯ ವಿಷಯವಾಗಿ, ವ್ಯಕ್ತಿತ್ವದ ವಿಷಯವಾಗಿ ಅವರು ಇತರೆ ಚಿತ್ರರಂಗದ ನಟರುಗಳಿಗೆ ಮಾದರಿ ಆಗಬಲ್ಲರು. ಆದರೆ ಕೆಲವು ವಿಷಯಗಳಲ್ಲಿ ವಿಶೇಷವಾಗಿ ಸ್ವತಃ ಚಿತ್ರರಂಗದ ವಿಷಯವಾಗಿ ಅವರಿಂದ ಇನ್ನಷ್ಟು ತೊಡಗಿಕೊಳ್ಳುವಿಕೆಯನ್ನು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಟರು ಮಾಡುತ್ತಿರುವ ಕಾರ್ಯವನ್ನು ಪ್ರೇಕ್ಷಕರು ಕನ್ನಡದ ಸ್ಟಾರ್ ನಟರು ತಂತ್ರಜ್ಞರಿಂದಲೂ ನಿರೀಕ್ಷಿಸುತ್ತಿದ್ದಾರೆ.

ತೆಲುಗಿನ ಸ್ಟಾರ್ ನಟರುಗಳಾದ ಮಹೇಶ್ ಬಾಬು, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಇನ್ನೂ ಹಲವರು ತಮ್ಮದೇ ಆದ ಚಿತ್ರಮಂದಿರಗಳನ್ನು ಅದರಲ್ಲೂ ಮಲ್ಟಿಸ್ಕ್ರೀನ್​​ಗಳನ್ನು ಹೊಂದಿರುವ ಮಲ್ಟಿಪ್ಲೆಕ್ಸ್​ಗಳನ್ನು ಹೊಂದಿರುವುದು ಮಾತ್ರವೇ ಅಲ್ಲದೆ, ತಮ್ಮ ಮಲ್ಟಿಪ್ಲೆಕ್ಸ್ ಬ್ಯುಸಿನೆಸ್ ಅನ್ನು ವಿಸ್ತರಣೆ ಸಹ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಚಿತ್ರಮಂದಿರಗಳು ಇರುವುದೇ ಕರ್ನಾಟಕದಲ್ಲಿ ಆದರೆ ಇಲ್ಲಿ ಮಾತ್ರ ಚಿತ್ರರಂಗದ ಮಂದಿ ಚಿತ್ರಮಂದಿರ ನಿರ್ಮಾಣದ ಕಡೆಗೆ ತಿರುಗಿಯೂ ನೋಡುತ್ತಿಲ್ಲ.

ಚಿತ್ರರಂಗದ ಮಂದಿ ವಿಶೇಷವಾಗಿ ಜನಪ್ರಿಯ ನಟ-ನಟಿಯರು ಸಿನಿಮಾಗಳಲ್ಲಿ ನಟಿಸುವುದಕ್ಕೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಅದರ ಹೊರತಾಗಿ ರಿಯಾಲಿಟಿ ಶೋಗಳಲ್ಲಿ ಜಡ್ಜ್​​ಗಳಾಗಿ ಹೋಗಿ ಅಲ್ಲಿಯೂ ಭರ್ಜರಿ ಕಮಾಯಿ ಮಾಡಿಕೊಂಡು ಇಷ್ಟು ಸಾಕೆಂದು ಆರಾಮವಾಗಿ ಕಾಲ ಕಳೆಯುತ್ತಾರೆ. ಕೆಲವು ಹೀರೋಗಳು ನಿರ್ಮಾಣ ಸಂಸ್ಥೆಗಳನ್ನು ಪ್ರಾರಂಭಿಸಿ ಸಿನಿಮಾ ನಿರ್ಮಿಸುತ್ತಿದ್ದಾರೆ ಅದು ಪ್ರಶಂಶನೀಯವೇ ಆದರೂ ಕರ್ನಾಟಕದಲ್ಲಿ ಅವಶ್ಯಕತೆ ಇರುವ ಚಿತ್ರಮಂದಿರಗಳ ನಿರ್ಮಾಣದ ಕಡೆಗೆ ಯಾರು ಗಮನ ಹರಿಸುತ್ತಿಲ್ಲ. ಇದರ ಲಾಭವನ್ನು ಪರಭಾಷೆ ನಟರು ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ಕರ್ನಾಟಕದಲ್ಲಿ 1000ಕ್ಕೂ ಕಡಿಮೆ ಚಿತ್ರಮಂದಿರಗಳಿವೆ. ಸಿಂಗಲ್ ಸ್ಕ್ರೀನ್​​ ಚಿತ್ರಮಂದಿರಗಳು ಅತ್ಯಂತ ವೇಗವಾಗಿ ಎಲ್ಲಿಯಾದರೂ ಅವಶೇಷ ಹೊಂದುತ್ತಿವೆ ಎಂದರೆ ಅದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ಅತ್ಯಂತ ಹೆಚ್ಚಿರುವುದಕ್ಕೆ ಚಿತ್ರಮಂದಿರಗಳ ಕೊರತೆಯೇ ಪ್ರಮುಖ ಕಾರಣ ಸಹ. ಇದೇ ಆಂಧ್ರ ಮತ್ತು ತಮಿಳುನಾಡಿನಲ್ಲಿ ಇಡೀ ದೇಶದಲ್ಲಿಯೇ ಹೆಚ್ಚು ಚಿತ್ರಮಂದಿರಗಳಿವೆ, ಅಲ್ಲಿ ಟಿಕೆಟ್ ಬೆಲೆ ಕಡಿಮೆ ಇದೆ ಮಾತ್ರವಲ್ಲದೆ ಸಿನಿಮಾಗಳು ಹೆಚ್ಚು ಯಶಸ್ವಿಯೂ ಆಗುತ್ತವೆ.

ಕರ್ನಾಟಕದಲ್ಲಿ ಚಿತ್ರಮಂದಿರಗಳ ಕೊರತೆಯನ್ನು ಗಮನಿಸಿರುವ ಪರಭಾಷೆ ನಟರುಗಳು ಇದೀಗ ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ಮಲ್ಟಿಪ್ಲೆಕ್ಸ್​​ಗಳನ್ನು ಪ್ರಾರಂಭ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಮಹೇಶ್ ಬಾಬು ಇಲ್ಲಿ ಮಲ್ಟಿಪ್ಲೆಕ್ಸ್ ಪ್ರಾರಂಭಿಸಿದ್ದಾರೆ. ಮುಂದೆ ಅಲ್ಲು ಅರ್ಜುನ್ ಸಹ ತಮ್ಮ ಎಎ ಸಿನಿಮಾಸ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಬಹುದು. ಲಾಭ ಇಲ್ಲದ ಹೊರತು ಅವರು ಇಲ್ಲಿ ಚಿತ್ರಮಂದಿರ ಪ್ರಾರಂಭಿಸುತ್ತಿರಲಿಲ್ಲ ಅಲ್ಲವೆ? ಅದು ಮಾತ್ರವೇ ಅಲ್ಲದೆ, ತೆಲುಗಿನ ಹಲವು ನಟರುಗಳು ಆಂಧ್ರ, ತೆಲಂಗಾಣಗಳಲ್ಲಿ ಚಿತ್ರಮಂದಿರ ಹೊಂದಿದ್ದಾರೆ. ಸ್ಟುಡಿಯೋಗಳನ್ನು ಹೊಂದಿದ್ದಾರೆ. ವಿಎಫ್​​ಎಕ್ಸ್ ಸ್ಟುಡಿಯೋಗಳನ್ನು ಆರಂಭಿಸಿದ್ದಾರೆ. ಚಿತ್ರರಂಗಕ್ಕೆ ಅನುಕೂಲ ಆಗುವ ಜೊತೆಗೆ ಸ್ವತಃ ಲಾಭ ಗಳಿಸುವ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಕನ್ನಡದ ನಟರು ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ ಅನಿಸುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *