ಖಾಲಿ ನಿವೇಶನ ಸ್ವಚ್ಛಗೊಳಿಸದ ಮಾಲೀಕರಿಗೆ ಬೀಳಲಿರುವ ದಂಡ ಎಷ್ಟು?
ಬೆಂಗಳೂರು, ಆಗಸ್ಟ್ 10: ತ್ಯಾಜ್ಯ ಮುಕ್ತ ಅಭಿಯಾನದಡಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದ ಮಾಲೀಕರ ವಿರುದ್ಧ ವಿಧಿಸಲಾಗುವ ದಂಡದ ವಿವರಗಳ ಪಟ್ಟಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಡುಗಡೆ ಮಾಡಿದೆ. ಆಗಸ್ಟ್ 15ರ ಒಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದರೆ, ಜಿಬಿಎ ವತಿಯಿಂದಲೇ ತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗುತ್ತದೆ. ಸ್ವಚ್ಛತಾ ವೆಚ್ಚದ ಜತೆಗೆ ತ್ಯಾಜ್ಯ ಸಾಗಣೆ ವೆಚ್ಚವನ್ನೂ ಸಂಬಂಧಪಟ್ಟ ನಿವೇಶನ ಮಾಲೀಕರಿಂದ ವಸೂಲಿ ಮಾಡಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಗರದಲ್ಲಿರುವ ಎಲ್ಲಾ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿ, ನಗರ ಪಾಲಿಕೆಗಳು ಗುರುತಿಸಿರುವ ನಿಗದಿತ ಸ್ಥಳಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಅಗತ್ಯವಿದ್ದರೆ, ಸ್ವಚ್ಛತಾ ಕಾರ್ಯಕ್ಕಾಗಿ ಸಂಬಂಧಪಟ್ಟ ನಗರ ಪಾಲಿಕೆಗಳು ಅಧಿಸೂಚಿಸಿರುವ ಸೇವಾ ಪೂರೈಕೆದಾರರ ಸೇವೆಯನ್ನೂ ಪಡೆಯಬಹುದು ಎಂದು ತಿಳಿಸಲಾಗಿದೆ. ಕಸ, ಕಟ್ಟಡ ಅವಶೇಷಗಳು, ಗಿಡಗಂಟಿಗಳು ಅಥವಾ ಇತರ ತ್ಯಾಜ್ಯದಿಂದ ತುಂಬಿರುವ ಖಾಲಿ ನಿವೇಶನಗಳ ಫೋಟೋಗಳನ್ನು ಜಿಪಿಎಸ್ ಸ್ಥಳ ನಿರ್ದೇಶಾಂಕಗಳೊಂದಿಗೆ 9448197197 ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಬಹುದು. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದೂ ತಿಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಸ್ಟಾರ್ ಹೋಟೆಲ್‌ಗಳ ಬಂಡವಾಳ ಬಯಲು: 26 ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ
ವಿಧಿಸಲಾಗುವ ದಂಡ ಎಷ್ಟು?
| ಸೈಟ್ ಗಾತ್ರ | ಸ್ವಚ್ಛತಾ ಶುಲ್ಕ (ಕಾಂಪೌಂಡ್ ಇಲ್ಲದ ಸೈಟ್) | ಸ್ವಚ್ಛತಾ ಶುಲ್ಕ (ಕಾಂಪೌಂಡ್ ಇರುವ ಸೈಟ್) | ತ್ಯಾಜ್ಯ ಸಾಗಣೆ ವೆಚ್ಚ |
| 600 ಚದರ ಅಡಿ | 6700 | 7700 | 19200 |
| 1200 ಚದರ ಅಡಿ | 13400 | 14400 | 38400 |
| 1500 ಚದರ ಅಡಿ | 16750 | 17750 | 48000 |
| 2500 ಚದರ ಅಡಿ | 26800 | 27800 | 76800 |
| 4000 ಚದರ ಅಡಿ | 46700 | 47700 | 128000 |
| ಸೂಚನೆ: ಹೆಚ್ಚಿನ ವಿಸ್ತೀರ್ಣಕ್ಕೆ ಅನುಗುಣವಾಗಿ ವೆಚ್ಚ ನಿರ್ಧಾರ | |||
ಘನತ್ಯಾಜ್ಯ ನಿರ್ವಹಣಾ ಉಪನಿಯಮ, 2020ರ ನಿಯಮ 18(1)(a)(ii) ಪ್ರಕಾರ, ಖಾಲಿ ನಿವೇಶನವನ್ನು ಸ್ವಚ್ಛಗೊಳಿಸದಿರುವ ಬಗ್ಗೆ ಮಾಲೀಕರಿಗೆ ನೋಟಿಸ್ ನೀಡಿದ ಬಳಿಕ, ನಾಗರಿಕ ಸಂಸ್ಥೆಗೆ ನಿವೇಶನ ಪ್ರವೇಶಿಸಿ ತ್ಯಾಜ್ಯ ತೆರವುಗೊಳಿಸುವ ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ವ್ಯಕ್ತಿಯಿಂದ ವಸೂಲಿ ಮಾಡುವ ಅಧಿಕಾರವಿದೆ. ಅದೇ ರೀತಿ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ರ ಸೆಕ್ಷನ್ 285(2) ಅಡಿಯಲ್ಲಿ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಖಾಲಿ ನಿವೇಶನಗಳಿಂದ ತ್ಯಾಜ್ಯ, ಕಟ್ಟಡ ಅವಶೇಷಗಳು ಅಥವಾ ನಿರ್ವಹಣೆಯಾಗದ ಕಸವನ್ನು ತೆರವುಗೊಳಿಸಿ, ಅದರ ವೆಚ್ಚವನ್ನು ಆಸ್ತಿ ಮಾಲೀಕರಿಂದ ನೇರವಾಗಿ ಅವರ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡುವ ಅಧಿಕಾರ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 4:45 pm, Mon, 10 August 26
