ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ – Kannada News | Udhayanidhi Stalin released hours after arrest in Remark against Trisha Case

ಚೆನ್ನೈ, ಆಗಸ್ಟ್ 4: ಕಾವೇರಿ ನೀರು ಹಂಚಿಕೆ ವಿವಾದದ ಪ್ರತಿಭಟನೆಯಲ್ಲಿ ನಟಿ ತ್ರಿಶಾ (Trisha Krishnan) ಕುರಿತು ಆಡಿದ ವಿವಾದಾತ್ಮಕ ಹೇಳಿಕೆಗಾಗಿ ಬಂಧನಕ್ಕೊಳಗಾಗಿದ್ದ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin), ಬಂಧನವಾದ ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವಿಚಾರಣೆ ನಡೆಸಿದ ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಡಿಎಂಕೆ ನಾಯಕನಿಗೆ ತಕ್ಷಣದ ರಿಲೀಫ್ ಸಿಕ್ಕಂತಾಗಿದೆ.

ಪೋಲಿಸರು ಬಂಧಿಸಿ ಕರೆದೊಯ್ಯುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಉದಯನಿಧಿ, “ನಾನು ಮುಖ್ಯಮಂತ್ರಿಯವರ ಹೆಸರನ್ನು ಹೊರತುಪಡಿಸಿ ಬೇರೆ ಯಾರ ಹೆಸರನ್ನಾದರೂ ಹೇಳಿದ್ದೇನಾ? ಹಾಗಿದ್ದರೂ ಏಕೆ ನನ್ನನ್ನು ಬಂಧಿಸುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ನ್ಯಾಯಾಲಯವೇ ಸತ್ಯವೇನೆಂದು ತೀರ್ಮಾನಿಸಲಿ” ಎಂದಿದ್ದರು.

ಇದನ್ನೂ ಓದಿ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸರ ವಶಕ್ಕೆ!

ಉದಯನಿಧಿ ವಿರುದ್ಧ ದಾಖಲಾದ ಪ್ರಕರಣಗಳು:

ಅಶ್ಲೀಲ ಪದಗಳ ಬಳಕೆ ಮತ್ತು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಉದಯನಿಧಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದ್ವೇಷವನ್ನು ಪ್ರಚೋದಿಸುವುದು, ಗಲಭೆ ಎಬ್ಬಿಸುವ ಉದ್ದೇಶದಿಂದ ಉದ್ರೇಕಿಸುವುದು ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಒಟ್ಟು 9 ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಇದರೊಂದಿಗೆ ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯ ನಿಬಂಧನೆಗಳನ್ನೂ ಅನ್ವಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಉದಯನಿಧಿ ಸ್ಟಾಲಿನ್ ವಿರುದ್ಧ ದೂರು ನೀಡಿದ ನಂತರ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಉದಯನಿಧಿ ಅವರ ಬಂಧನವನ್ನು ಖಂಡಿಸಿ ಡಿಎಂಕೆ ಕಾರ್ಯಕರ್ತರು ತಮಿಳುನಾಡಿನಾದ್ಯಂತ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು.

ಇದನ್ನೂ ಓದಿ: ‘ತ್ರಿಶಾ ಹೆಸರನ್ನೇ ಹೇಳಿಲ್ಲ’; ಉದಯನಿಧಿ ಬಂಧನದ ಬಳಿಕ ಟಿವಿಕೆ ಸರ್ಕಾರದ ವಿರುದ್ಧ ತಿರುಗಿಬಿದ್ದ ಡಿಎಂಕೆ

ಏನಿದು ಘಟನೆ?:

ಸೋಮವಾರ ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವೇಳೆ ಸಭೆಯಲ್ಲಿದ್ದ ಯಾರೋ ಒಬ್ಬರು “ತ್ರಿಶಾ, ತ್ರಿಶಾ” ಎಂದು ಘೋಷಣೆ ಕೂಗಿದರು. ಆಗ ತಮ್ಮ ಭಾಷಣವನ್ನು ನಿಲ್ಲಿಸಿ ಕುಹಕವಾಡಿದ ಉದಯನಿಧಿ, “ಎಲ್ಲಿಗೆ ನೀರು ಹರಿಯಬೇಕೋ ಅಲ್ಲಿಗೆ ಹರಿಯಬೇಕು, ನಾನು ಕಾವೇರಿ ಕುರಿತು ಹೇಳಿದ್ದು” ಎಂದು ನಟಿ ತ್ರಿಶಾ ಕುರಿತು ಪರೋಕ್ಷವಾಗಿ ದ್ವಂದ್ವಾರ್ಥದ ಹೇಳಿಕೆ ನೀಡಿದ್ದರು. ಈ ಮಾತುಗಳು ವ್ಯಾಪಕ ರಾಜಕೀಯ ಆಕ್ರೋಶಕ್ಕೆ ಕಾರಣವಾದವು.

ಹೈಕೋರ್ಟ್‌ ವಿಚಾರಣೆ:

ನೀಲಂಕರೈನಲ್ಲಿರುವ ಉದಯನಿಧಿ ಅವರ ನಿವಾಸಕ್ಕೆ ಪೊಲೀಸರು ತಲುಪಿದ ತಕ್ಷಣವೇ ಅವರ ಕಾನೂನು ತಂಡವು ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು. ವಿಚಾರಣೆಯ ಸಂದರ್ಭದಲ್ಲಿ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು ಉದಯನಿಧಿ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅಲ್ಲದೆ, ಉದಯನಿಧಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಯಾವುದೇ ಉದ್ದೇಶ ಪೊಲೀಸರಿಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ಪೋಲಿಸರಿಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಪಡೆಯುವ ಇಚ್ಛೆಯಿಲ್ಲ, ಕೇವಲ ವಿಚಾರಣೆ ನಡೆಸುವುದು ಮಾತ್ರವೇ ಉದ್ದೇಶವಾಗಿದೆ” ಎಂದು ವಿಜಯ್ ನೇತೃತ್ವದ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಈ ವಾದವನ್ನು ಸ್ವೀಕರಿಸಿದ ಹೈಕೋರ್ಟ್, ವಿಚಾರಣೆ ನಡೆಸಿದ ತಕ್ಷಣವೇ ಅವರನ್ನು ಅದೇ ದಿನ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಆದೇಶಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:47 pm, Tue, 4 August 26

Source link

Leave a Reply

Your email address will not be published. Required fields are marked *