‘ದಕ್ಷಿಣ ಕಾಶಿ’ ಶಿವಗಂಗೆ ಬೆಟ್ಟ ಏರುವ ಮುನ್ನ ಜೋಕೆ!; ತುಕ್ಕು ಹಿಡಿದು ಶಿಥಿಲಗೊಂಡ ಕಬ್ಬಿಣದ ಕಂಬಿಗಳು – Kannada News | Nelamangala Shivagange Trekkers Face Life Threatening Rusted Railings

ನೆಲಮಂಗಲ ಜು. 2: ಚಾರಣಿಗರ ಸ್ವರ್ಗ ಹಾಗೂ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಪ್ರವಾಸಿಗರ ಸುರಕ್ಷತೆಗೆ ಭಾರೀ ಅಪಾಯ ಉಂಟಾಗಿದೆ. ಬೆಟ್ಟದ ತುತ್ತ ತುದಿಯನ್ನು ಏರಲು ಅಳವಡಿಸಲಾಗಿರುವ ಕಬ್ಬಿಣದ ಸುರಕ್ಷತಾ ಕಂಬಿಗಳು ಸಂಪೂರ್ಣವಾಗಿ ತುಕ್ಕು ಹಿಡಿದು, ಸಡಿಲಗೊಂಡು ಸಾವು ಆಹ್ವಾನ ನೀಡುವ ದುಸ್ಥಿತಿಯಲ್ಲಿದ್ದು, ಮುಜರಾಯಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಶಿವಗಂಗೆ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 4400 ಅಡಿ ಎತ್ತರದಲ್ಲಿದೆ. ಈ ಬೆಟ್ಟವನ್ನು ಹತ್ತಲು ಪ್ರತಿನಿತ್ಯ ಸಾವಿರಾರು ಭಕ್ತರು ಹಾಗೂ ದೇಶ-ವಿದೇಶಗಳ ಚಾರಣಿಗರು (Trekkers) ಬರುತ್ತಾರೆ. ಕಡಿದಾದ ಈ ಬೆಟ್ಟವನ್ನು ಏರಲು ಪ್ರವಾಸಿಗರಿಗೆ ಆಸರೆಯಾಗಿ ಅಳವಡಿಸಲಾಗಿದ್ದ ಕಬ್ಬಿಣದ ರೇಲಿಂಗ್ಸ್ (ಕಂಬಿಗಳು) ಈಗ ಅತ್ಯಂತ ಅಪಾಯಕಾರಿ ಸ್ಥಿತ ತಲುಪಿವೆ. ಕಂಬಿಗಳಿಗೆ ಹಿಡಿದಿರುವ ಸಪೋರ್ಟ್‌ಗಳು ಸಡಿಲಗೊಂಡಿದ್ದು, ಸ್ವಲ್ಪ ಆಯತಪ್ಪಿದರೂ ಪ್ರವಾಸಿಗರು ಆಳವಾದ ಕಂದಕಕ್ಕೆ ಬೀಳುವ ಭೀತಿ ಎದುರಾಗಿದೆ. ಬೆಟ್ಟದ ತುದಿಯಲ್ಲಿ ಕಂಬಿಗಳು ಅಲುಗಾಡುತ್ತಿರುವ ಮತ್ತು ತುಕ್ಕು ಹಿಡಿದು ಮುರಿದು ಬೀಳುವ ಹಂತದಲ್ಲಿರುವ ದೃಶ್ಯಗಳನ್ನು ಕೆಲವು ಜಾಗೃತ ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮುಜರಾಯಿ ಇಲಾಖೆಯ ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ನಡೆಸಿದ್ದಾರೆ. “ಇಲ್ಲಿ ಸ್ವಲ್ಪ ನಿಯಂತ್ರಣ ತಪ್ಪಿದರೂ ಪ್ರಾಣಕ್ಕೇ ಕಂಟಕ ಗ್ಯಾರಂಟಿ. ಸಣ್ಣ ಪುಟ್ಟ ಮಕ್ಕಳು ಮತ್ತು ವೃದ್ಧರು ಈ ಕಂಬಿಗಳನ್ನು ನಂಬಿ ಬೆಟ್ಟ ಏರುತ್ತಾರೆ, ಅಧಿಕಾರಿಗಳು ಯಾವುದೋ ದೊಡ್ಡ ಅನಾಹುತ ನಡೆಯುವವರೆಗೆ ಕಾಯುತ್ತಿದ್ದಾರೆಯೇ?” ಎಂದು ಭಕ್ತರು ಪ್ರಶ್ನಿಸಿದ್ದಾರೆ.

ವರದಿ: ಮಂಜುನಾಥ್ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *