ದಕ್ಷಿಣ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ ತಮನ್ನಾ ಭಾಟಿಯಾ? – Kannada News | Tamannaah Slams South Cinema: Patriarchy and Objectification of Female Artists

ಖ್ಯಾತ ನಟಿ ತಮನ್ನಾ ಭಾಟಿಯಾ ಅವರು (Tamannah Bhatia) ಬಾಲಿವುಡ್ ಹಾಗೂ ದಕ್ಷಿಣ ಭಾರತ ಎರಡರಲ್ಲೂ ಕೆಲಸ ಮಾಡಿದ್ದಾರೆ. ಎರಡೂ ಕಡೆಗಳಲ್ಲಿ ಅವರಿಗೆ ಸಾಕಷ್ಟು ಅನುಭವ ಇದೆ. ಅವರು ಈಗ ಚಲನಚಿತ್ರ ರಂಗಗಳ ನಡುವಿನ ವ್ಯತ್ಯಾಸಗಳು ಮತ್ತು ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಸುದೀರ್ಘ ಸಿನಿ ಪಯಣದ ಅನುಭವಗಳನ್ನು ಹಂಚಿಕೊಂಡಿರುವ ಅವರು, ದಕ್ಷಿಣ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇದರಿಂದ ಅವರಿಗೆ ದಕ್ಷಿಣದ ಬಗ್ಗೆ ಬೇಸರ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.

ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿರುವ ತಮನ್ನಾ, ಮಹಿಳಾ ಕಲಾವಿದರನ್ನು ಚಿತ್ರರಂಗದಲ್ಲಿ ಬಿಂಬಿಸುವ ಮತ್ತು ನೋಡುವ ವಿಧಾನದ ಬಗ್ಗೆ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ, ‘ಬಾಲಿವುಡ್ ಚಿತ್ರರಂಗವು ಮಹಿಳಾ ಕಲಾವಿದರಿಗೆ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡಲು ಮುಕ್ತ ಅವಕಾಶ ನೀಡುತ್ತದೆ. ಇಲ್ಲಿ ಕೆಲವು ನಟಿಯರು ಕೇವಲ ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳಿಗೆ ಸೀಮಿತವಾದರೆ, ಇನ್ನೂ ಕೆಲವರು ಗ್ಲಾಮರ್ ಮತ್ತು ನಟನೆಯನ್ನು ಸಮನಾಗಿ ನಿಭಾಯಿಸಿಕೊಂಡು ಯಶಸ್ವಿಯಾಗಿದ್ದಾರೆ’ ಎಂದಿದ್ದಾರೆ.

ಆದರೆ, ದಕ್ಷಿಣ ಭಾರತದ ಚಿತ್ರರಂಗದ ಪರಿಸ್ಥಿತಿ ಭಿನ್ನವಾಗಿದೆ ಎಂದಿರುವ ಅವರು, ‘ದಕ್ಷಿಣ ಚಿತ್ರರಂಗದಲ್ಲಿ ಇಂದಿಗೂ ಪಿತೃಪ್ರಧಾನ ಮನಸ್ಥಿತಿ ಹೆಚ್ಚಾಗಿದೆ. ಇಲ್ಲಿ ಮಹಿಳಾ ನಟಿಯರನ್ನು ನೋಡುವ ದೃಷ್ಟಿಕೋನ ಕೆಲವೊಮ್ಮೆ ಗೌರವಯುತವಾಗಿ ಇರುವುದಿಲ್ಲ, ಅದು ಕಲಾವಿದರಿಗೆ ಮುಜುಗರ ಉಂಟುಮಾಡುತ್ತದೆ. ಈ ಐಟಂ ಸಾಂಗ್ ಎನ್ನುವ ಪದವು ಮಹಿಳಾ ನಟಿಯರನ್ನು ಕೇವಲ ಒಂದು ವಸ್ತುವಿನಂತೆ ಬಿಂಬಿಸುತ್ತದೆಯೇ ಹೊರತು, ಒಬ್ಬ ಕಲಾವಿದೆಯಾಗಿ ಅವರ ಕಷ್ಟ ಮತ್ತು ಕೊಡುಗೆಯನ್ನು ಪರಿಗಣಿಸುವುದಿಲ್ಲ. ಇಂತಹ ನೃತ್ಯಗಳನ್ನು ನಾನು ಯಾವಾಗಲೂ ನನ್ನ ಸ್ವಂತ ಇಷ್ಟ ಮತ್ತು ಷರತ್ತುಗಳ ಮೇಲೆಯೇ ಆಯ್ಕೆ ಮಾಡಿಕೊಂಡಿದ್ದೇನೆ. ಇವುಗಳನ್ನು ಕೇವಲ ಮನರಂಜನಾತ್ಮಕ ಪ್ರದರ್ಶನ ಎಂದು ನೋಡಬೇಕೇ ಹೊರತು, ಮಹಿಳೆಯರ ಗೌರವವನ್ನು ಕುಗ್ಗಿಸುವ ಲೇಬಲ್ ಬಳಸಬಾರದು’ ಎಂದಿದ್ದಾರೆ ತಮನ್ನಾ.

ಇದನ್ನೂ ಓದಿ: ಚಿತ್ರರಂಗಕ್ಕೆ ಬಂದು 21 ವರ್ಷ, ಈಗಲೂ ಎಷ್ಟು ಬ್ಯುಸಿ ಗೊತ್ತ ತಮನ್ನಾ

ಸದ್ಯ ಭಾರತೀಯ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಲಿಂಗ ತಾರತಮ್ಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ತಮನ್ನಾ ಭಾಟಿಯಾ ಅವರು ದಕ್ಷಿಣ ಚಿತ್ರರಂಗದ ಒಳಗಿನ ಪರಿಸ್ಥಿತಿಯ ಬಗ್ಗೆ ಮುಕ್ತವಾಗಿ ಧ್ವನಿ ಎತ್ತಿರುವುದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.ದಕ್ಷಿಣ ಭಾರತದ ಕೆಲಸದ ರೀತಿ ಬಗ್ಗೆ ಅವರಿಗೆ ಅಸಮಾಧಾನ ಇರೋದು ಸ್ಪಷ್ಟವಾವಾಗಿ ಕಾಣಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *