‘ದಯವಿಟ್ಟು ಇದನ್ನು ಇಲ್ಲಿಯೇ ನಿಲ್ಲಿಸಿ’; ಕೈ ಮುಗಿದು ಕೇಳಿಕೊಂಡ ಕೃಷಿ ತಾಪಂಡ – Kannada News | Krishi Thapanda’s Emotional Plea: Ask to Stop Speculation on Vyshak’s Death

ನಟಿ ಕೃಷಿ ತಾಪಂಡ ಅವರ ಆಪ್ತ ಗೆಳೆಯ ವೈಶಾಕ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ವಾಸವಿದ್ದ ಫ್ಲ್ಯಾಟ್ ಅಲ್ಲೇ ಅವರು ನಿಧನ ಹೊಂದಿದ್ದು ಶಾಕಿಂಗ್ ಎನಿಸಿದೆ. ಈ ಬಗ್ಗೆ ಕೃಷಿ ತಾಪಂಡ ಅವರು (Krishi Tapanda) ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮನದ ಆಳದ ನೋವು ಹಾಗೂ ಸಾರ್ವಜನಿಕ ವಲಯದ ಒತ್ತಡದ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ.

‘ಇಂತಹದ್ದೊಂದು ಬರಹವನ್ನು ಬರೆಯಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನಗೆ ಈ ಸಮಯದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮಾನಸಿಕ ಶಕ್ತಿ ಇಲ್ಲದಿದ್ದರೂ, ಸುತ್ತಲೂ ಕೇಳಿಬರುತ್ತಿರುವ ನಿರಂತರ ಊಹಾಪೋಹಗಳು ಮತ್ತು ಪ್ರಶ್ನೆಗಳಿಂದಾಗಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನನಗೆ ಅತ್ಯಂತ ಆಪ್ತರಾಗಿದ್ದ, ನನ್ನನ್ನು ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಲ್ಲಿ ನಾನಿದ್ದೇನೆ. ಈ ನಷ್ಟದಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ‘ಅವರ ಕುಟುಂಬ ಮತ್ತು ಆಪ್ತರು ಈ ದೊಡ್ಡ ನಷ್ಟವನ್ನು ಅರಗಿಸಿಕೊಳ್ಳಲು ಹೆಣಗಾಡುತ್ತಿರುವಾಗ, ನಿರಂತರವಾಗಿ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಮಾಧ್ಯಮಗಳು ಗೌರವಯುತವಾಗಿ ನಡೆದುಕೊಂಡರೆ, ಇನ್ನು ಕೆಲವು ಕೇವಲ ರಿಯಾಕ್ಷನ್‌ಗಾಗಿ ಒತ್ತಾಯಿಸುತ್ತಿವೆ. ನೀವು ಹೇಗಿದ್ದೀರಾ ಎಂದು ಕೇಳುವ ಬದಲು ನಿಮ್ಮ ರಿಯಾಕ್ಷನ್ ಏನು ಎಂದು ಕೇಳುತ್ತಿದ್ದಾರೆ’ ಎಂದಿದ್ದಾರೆ ಕೃಷಿ.

ವೈಶಾಕ್ ಸಾವಿನ ಸುತ್ತ ನಡೆಯುತ್ತಿರುವ ಅನಗತ್ಯ ಚರ್ಚೆಗಳನ್ನು ನಿಲ್ಲಿಸುವಂತೆ ಕೃಷಿ ಕೈಮುಗಿದು ಬೇಡಿಕೊಂಡಿದ್ದಾರೆ. ‘ಇಲ್ಲಿ ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಆಪ್ತನನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದು ಅನಗತ್ಯ ಪ್ರಶ್ನೆ, ಊಹೆ ಮತ್ತು ವದಂತಿಗಳು ಇಲ್ಲಿ ಉಳಿದು ನೋವು ಅನುಭವಿಸುತ್ತಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಮಗೆ ಶಾಂತಿಯಿಂದ ದುಃಖಿಸಲು ಬಿಡಿ’ ಎಂದು ಅವರು ವಿನಂತಿಸಿದ್ದಾರೆ.

‘ಯಾವುದೇ ಸತ್ಯ ತಿಳಿಯದೆ ಕೇವಲ ಉತ್ತರಗಳಿಗಾಗಿ ಹುಡುಕುತ್ತಿರುವವರಿಗೆ ಸಂದೇಶ ನೀಡಿರುವ ಅವರು, ಮತ್ತೊಂದೆಡೆ ತಮಗೆ ಸಂದೇಶ ಹಾಗೂ ಪ್ರಾರ್ಥನೆಗಳ ಮೂಲಕ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ‘ಸದ್ಯಕ್ಕೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸುವ ಶಕ್ತಿ ನನಗಿಲ್ಲ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಚಿರಋಣಿ’ ಎಂದಿದ್ದಾರೆ.

ಇದನ್ನೂ ಓದಿ: ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?

ತಮ್ಮ ಕೊನೆಯ ಪೋಸ್ಟ್‌ನಲ್ಲಿ ಅತ್ಯಂತ ಮಾರ್ಮಿಕವಾಗಿ ಬರೆದುಕೊಂಡಿರುವ ಕೃಷಿ ತಾಪಂಡ, ‘ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳುವಂತೆ ಮಾಡಬೇಡಿ. ದಯವಿಟ್ಟು ಎಲ್ಲರೂ ದಯೆ ಮತ್ತು ಕರುಣೆಯನ್ನು ಆಯ್ಕೆ ಮಾಡಿಕೊಳ್ಳಿ. ದಯವಿಟ್ಟು ಇದನ್ನು ಇಷ್ಟಕ್ಕೇ ನಿಲ್ಲಿಸಿ’ ಎಂದು ಕೈಮುಗಿದು ಪ್ರಾರ್ಥಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:04 am, Mon, 29 June 26

Source link

Leave a Reply

Your email address will not be published. Required fields are marked *