ಬೆಂಗಳೂರು, ಮೇ 6: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಸುತ್ತಲಿನ ರಾಜಕೀಯ ಜಟಾಪಟಿ ತೀವ್ರಗೊಂಡಿದೆ. ಇದೇ ಸಂದರ್ಭದಲ್ಲಿ, ಅಂಚೆ ಮತ ಮರು ಎಣಿಕೆಯ ನಂತರ ನೂತನ ಶಾಸಕರಾಗಿ ಆಯ್ಕೆಯಾದ ಡಿಎನ್ ಜೀವರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ, ‘ದಯವಿಟ್ಟು ನನ್ನನ್ನು ಬದುಕಲು ಬಿಡಿ’ ಎಂದು ಕೈಮುಗಿದು ಮನವಿ ಮಾಡಿದ್ದಾರೆ. ಚುನಾವಣಾ ಆಯೋಗದಿಂದ ಪ್ರಮಾಣಪತ್ರ ಬಂದ ಕೆಲವೇ ಸಮಯದಲ್ಲಿ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು ಎಂದು ಜೀವರಾಜ್ ತಿಳಿಸಿದ್ದಾರೆ. ಈ ಎಫ್ಐಆರ್ಗೆ ಸಂಬಂಧಿಸಿದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ, ಹಾಗೂ ಪ್ರಕರಣದ ವಿಚಾರಣೆ ಜುಲೈ 7ಕ್ಕೆ ಮುಂದೂಡಲ್ಪಟ್ಟಿದೆ.
ಅಂಚೆ ಮತ ಮರು ಎಣಿಕೆ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರಂಗೆ ಮರು ಎಣಿಕೆ ನಡೆದು ತಾವು ಶಾಸಕರಾಗಿ ಆಯ್ಕೆಯಾಗಿದ್ದರೂ, ಪ್ರಮಾಣವಚನಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಜೀವರಾಜ್ ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಪ್ರಮಾಣವಚನಕ್ಕೆ ಯಾವುದೇ ಅಡ್ಡಿ ಇಲ್ಲ. ಇದು ತಾಂತ್ರಿಕ ವಿಚಾರವಾಗಿದ್ದು, ನಿಯಮಾನುಸಾರ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ವೋಟ್ ಕಳ್ಳತನ ಆರೋಪಕ್ಕೆ ಪ್ರತಿಕ್ರಿಯಿಸಿದ ಜೀವರಾಜ್, ರಾಜಕೀಯ ಹಿರಿಯರಿಂದ ಇಂತಹ ಆರೋಪಗಳು ತಮಗೆ ನೋವುಂಟು ಮಾಡಿವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
