ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಮ್ಯಾನೇಜರ್ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ 2018 ರಿಂದಲೂ ನಾಪತ್ತೆ ಆಗಿದ್ದರು. ಅವರ ಮೇಲೆ ಸಾಲ, ವಂಚನೆ ಆರೋಪಗಳಿದ್ದವು. ಅವರ ಮೇಲೆ ಲುಕೌಟ್ ನೊಟೀಸ್ ಸಹ ಜಾರಿ ಆಗಿತ್ತು. ನಿನ್ನೆ ಹಠಾತ್ತನೆ ಮಲ್ಲಿಕಾರ್ಜುನ್ ಅವರು ಸುದ್ದಿಗೋಷ್ಠಿ ನಡೆಸಿ, ತಮ್ಮ ವೈಯಕ್ತಿಕ ಜೀವನ, ಹಣಕಾಸು ಸಮಸ್ಯೆ, ನಾಪತ್ತೆ ಆಗಿದ್ದಕ್ಕೆ ಕಾರಣ ಹೀಗೆ ಹಲವು ವಿಷಯಗಳನ್ನು ಮಾತನಾಡಿದರು. ಈ ವೇಳೆ ‘ಪ್ರೇಮಬರಹ’ ಸಿನಿಮಾದ ವಿವಾದ ಕುರಿತು ಮಾತನಾಡುತ್ತಾ, ಆಗಿದ್ದ ಅಕೌಂಟಂಟ್ ಮಾಡಿದ ತಪ್ಪಿನಿಂದ ಅರ್ಜುನ್ ಸರ್ಜಾ ಹಾಗೂ ತಮಗೆ ವಿವಾದ ಉಂಟಾಯ್ತು ಎಂದಿದ್ದರು.
ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ್ದ ‘ಪ್ರೇಮಬರಹ’ ಸಿನಿಮಾವನ್ನು ಮಲ್ಲಿಕಾರ್ಜುನ್ ವಿತರಣೆ ಮಾಡಿದ್ದರು. ವಿತರಣೆಗೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ಅವರಿಗೆ ಮಲ್ಲಿಕಾರ್ಜುನ್ ಒಂದಷ್ಟು ಲೆಕ್ಕಗಳನ್ನು ನೀಡಿದ್ದರು. ಅದರಲ್ಲಿ ತಪ್ಪು ಕಂಡುಬಂದಿತ್ತು. ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ದೀಪಕ್ ಟೈಪ್ ಮಾಡಿ ಕೊಟ್ಟ ಲೆಕ್ಕವನ್ನು ನಾನು ಸರಿಯಾಗಿ ನೋಡದೇ ಅರ್ಜುನ್ ಸರ್ಜಾ ಅವರಿಗೆ ಕೊಟ್ಟಿದ್ದೆ ಎಂದು ಮಲ್ಲಿಕಾರ್ಜುನ್ ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಕೌಂಟೆಂಟ್ ದೀಪಕ್, ‘ಡೈಲಿ ಮಾಧ್ಯಮ’ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿ ವಿವರಣೆ ನೀಡಿದ್ದಾರೆ. ‘ತೂಗುದೀಪ ನಿರ್ಮಾಣ ಸಂಸ್ಥೆಯಲ್ಲಿ ಎಲ್ಲವನ್ನೂ ಮಲ್ಲಿಕಾರ್ಜುನ ಅವರೇ ನೋಡಿಕೊಳ್ಳುತ್ತಿದ್ದರು. ಬೇರೆಯವರೆಲ್ಲ ಕೇವಲ ನಾಮಕಾವಸ್ತೆಗೆ ಇದ್ದವರಷ್ಟೆ. ಅವರು ಹೇಳಿದಂತೆ ನಾನು ಲೆಕ್ಕ ಬರೆದುಕೊಟ್ಟೆ, ಅದನ್ನೇ ಅವರು ಅರ್ಜುನ್ ಸರ್ಜಾ ಅವರಿಗೆ ಕೊಟ್ಟರು. ಅರ್ಜುನ್ ಸರ್ಜಾ ಅವರು ಹೇಳಿದ ಬಳಿಕ ಮತ್ತೆ ಲೆಕ್ಕ ಬದಲಾಯಿಸಿದ್ದು ಸಹ ನಿಜ. ಆದರೆ ನಾನು ಲೆಕ್ಕ ಬರೆದೆ ಎಂಬುದು ಸುಳ್ಳು’ ಎಂದಿದ್ದಾರೆ.
ಇದನ್ನೂ ಓದಿ:ದರ್ಶನ್ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಎಲ್ಲವನ್ನೂ ಹೇಳಿದ ಮಲ್ಲಿಕಾರ್ಜುನ್
‘ನಾನು (ದೀಪಕ್) ತೂಗುದೀಪ ಸಂಸ್ಥೆಯಲ್ಲಿ ಸುಮಾರು ಐದು ವರ್ಷಗಳ 2013 ರಿಂದ 2018ರ ವರೆಗೆ ಅಕೌಂಟೆಂಟ್ ಆಗಿ ಕೆಲಸ ಮಾಡಿದೆ. ಮಲ್ಲಿಕಾರ್ಜುನ್ ಅವರು ಅಲ್ಲಿ ಬಹಳ ವರ್ಷಗಳಿಂದಲೂ ಇದ್ದರು. ಎಲ್ಲ ವ್ಯವಹಾರವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರು ಹೇಳಿದಂತೆ ಎಲ್ಲರೂ ಕೇಳಬೇಕಿತ್ತು’ ಎಂದು ದೀಪಕ್ ಹೇಳಿದ್ದಾರೆ.
ಅರ್ಜುನ್ ಸರ್ಜಾ ಅವರ ‘ಪ್ರೇಮ ಬರಹ’ ಸಿನಿಮಾದ ವಿತರಣೆ ವಿಷಯದಲ್ಲಿ ಮಲ್ಲಿಕಾರ್ಜುನ್ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ್ ವಿರುದ್ಧ ದೂರು ಸಹ ದಾಖಲಿಸಿದ್ದರು. ಇದೇ ದೂರಿನ ಅನ್ವಯ ಮಲ್ಲಿಕಾರ್ಜುನ್ ವಿರುದ್ಧ ಲುಕೌಟ್ ನೊಟೀಸ್ ಸಹ ಹೊರಡಿಸಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
