ದರ ಏರಿಕೆ ಬಿಸಿ​​: ಸರ್ಕಾರದ ಮೊರೆ ಹೋದ ಆಟೋ ಚಾಲಕರು; ಒನ್ ಸಿಟಿ ಒನ್ ರೇಟ್​ ಜಾರಿಗೆ ಮನವಿ – Kannada News | Price hike: Auto drivers appeal to government for implementation of One City One Rate

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 16: ಸದ್ಯ ರಾಜ್ಯದ (Karnataka) ಜನರಿಗೆ ಬೆಲೆ ಏರಿಕೆ (price hike) ಬಿಸಿ ತಟ್ಟುತ್ತಿದೆ. ಇರಾನ್-ಅಮೆರಿಕ ಯುದ್ಧದ ಎಫೆಕ್ಟ್, ಆಮದು ವೆಚ್ಚದ ಪರಿಣಾಮ, ಪೆಟ್ರೋಲ್, ಡೀಸೆಲ್ ದರ ಭರ್ತಿ ಮೂರು ರೂ ಏರಿಕೆಯಾಗಿದೆ. ಸಿಎನ್‌ಜಿ, ಎಲ್​​ಪಿಜಿ ಗ್ಯಾಸ್​ ದರವೂ ಏರಿಕೆ ಆಗಿದೆ. ಈ ಬೆನ್ನಲ್ಲೇ ಸ್ನೇಹಜೀವಿ ಆಟೋ ಚಾಲಕರ (auto drivers) ಟ್ರೇಡ್ ಯೂನಿಯನ್​​ ಸರ್ಕಾರದ ಮೊರೆ ಹೋಗಿದ್ದಾರೆ. ಆಟೋ ಮೀಟರ್​​ ದರ ಏರಿಸುವಂತೆ ಒತ್ತಾಯಿಸಿದ್ದು, ನಮ್ಮ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ನಿಭಾಯಿಸಿವಂತೆ ಬೇಡಿಕೆ ಇಟ್ಟಿದ್ದಾರೆ.

ಮುಖ್ಯಾಂಶಗಳು

  • ದರ ಏರಿಕೆ ಬೆನ್ನಲ್ಲೇ ಸರ್ಕಾರದ ಮೊರೆಹೋದ ಆಟೋ ಚಾಲಕರು
  • ಒನ್ ಸಿಟಿ ಒನ್ ರೇಟ್ ಜಾರಿಗೆ ಮನವಿ
  • ದಿನಕ್ಕೆ 14 ಗಂಟೆ ಕೆಲಸ ಮಾಡಿದ್ರು ಜೀವನ ನಡೆಸುವುದು ಕಷ್ಟ

ದರ ಗಗನಕ್ಕೇರಿದ ಬೆನ್ನಲ್ಲೇ ತತ್ತರಿಸಿದ ಆಟೋ ಚಾಲಕರು

ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ಸೇರಿದಂತೆ ಇಂಧನ ದರಗಳು ಗಗನಕ್ಕೇರಿರುವ ಹಿನ್ನೆಲೆಯಲ್ಲಿ ತತ್ತರಿಸಿರುವ ಆಟೋ ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೊರೆ ಹೋಗಿದ್ದಾರೆ. ದುಬಾರಿ ದುನಿಯಾದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ ಆಟೋ ಚಾಲಕರ ಜೀವನ ದುಸ್ತರವಾಗಿದೆ. ದಿನಕ್ಕೆ 14 ಗಂಟೆಗಳ ಕಾಲ ದುಡಿದರೂ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಳಲು ತೋಡಿಕೊಂಡಿದೆ.

ಇದನ್ನೂ ಓದಿ: ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ

ಈ ಹಿನ್ನೆಲೆಯಲ್ಲಿ ಟ್ರೇಡ್ ಯೂನಿಯನ್ ಸರ್ಕಾರಕ್ಕೆ ಹಲವು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದೆ. ರಾಜ್ಯಾದ್ಯಂತ ‘ಒನ್ ಸಿಟಿ ಒನ್ ರೇಟ್’ ನೀತಿಯನ್ನು ಜಾರಿಗೊಳಿಸಬೇಕು, ಪ್ರಸ್ತುತ ಇರುವ ಆಟೋ ಮೀಟರ್ ದರವನ್ನು ಪರಿಷ್ಕರಿಸಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ. ಅಲ್ಲದೇ, ಕ್ಯಾಬ್ ಅಗ್ರಿಗೇಟರ್‌ಗಳಲ್ಲಿ ಕಡಿಮೆ ದರ ಸಿಗುತ್ತಿರುವುದರಿಂದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿರುವುದರಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಕರ್ನಾಟಕ ರಾಜ್ಯಸಭಾ ಸದಸ್ಯನ ಕುಟುಂಬ: ಎಲೆಕ್ಟ್ರಿಕ್ ಸ್ಟವ್ ಬಳಕೆ, ಸೈಕಲ್ ಸವಾರಿ

ಇದರೊಂದಿಗೆ, ಆರ್ಥಿಕ ಸಂಕಷ್ಟದಲ್ಲಿರುವ ಆಟೋ ಚಾಲಕರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂಬ ಮಹತ್ವದ ಬೇಡಿಕೆಯನ್ನೂ ಯೂನಿಯನ್ ಮುಂದಿಟ್ಟಿದೆ. ಇಂಧನ ಬೆಲೆ ಏರಿಕೆಯ ನೇರ ಪರಿಣಾಮ ಆಟೋ ಚಾಲಕರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪರಿಹಾರ ಕಲ್ಪಿಸಬೇಕು ಎಂದು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಮನವಿ ಮಾಡಿದೆ.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *