2016 ರಿಂದ 2026… ಅಕ್ಷರಶಃ ಹತ್ತು ವರ್ಷಗಳ ಅಂತರ! ಭುವನೇಶ್ವರ್ ಕುಮಾರ್ ಐಪಿಎಲ್ನಲ್ಲಿ ತಮ್ಮ ನಾಲ್ಕನೇ ಸಿಕ್ಸರ್ ಸಿಡಿಸಲು ತೆಗೆದುಕೊಂಡ ಸಮಯವಿದು. ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಅನಿರೀಕ್ಷಿತ ಗೆಲುವು ತಂದುಕೊಟ್ಟ ಆ ಸಿಕ್ಸರ್ ಮೌಲ್ಯ ಬರೋಬ್ಬರಿ 99 ಲಕ್ಷ ರೂ..!
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಗೆ ಗೆಲ್ಲಲು ಕೊನೆಯ ಓವರ್ನಲ್ಲಿ ಕಠಿಣ ಸವಾಲಿತ್ತು. ಅದರಲ್ಲೂ ಅಂತಿಮ 3 ಎಸೆತಗಳಲ್ಲಿ 9 ರನ್ ಬೇಕಿದ್ದಾಗ, ಒತ್ತಡದ ಪರಿಸ್ಥಿತಿಯಲ್ಲೂ ಭುವನೇಶ್ವರ್ ಕುಮಾರ್ ಮೈದಾನದ ಆಚೆಗೆ ಚೆಂಡನ್ನು ಅಟ್ಟಿದರು. ಈ ಒಂದು ಸಿಕ್ಸರ್ನಿಂದ ಆರ್ಸಿಬಿಯ ಗೆಲುವಿನ ಸಾಧ್ಯತೆಯನ್ನು 51% ರಿಂದ ನೇರವಾಗಿ 99% ಕ್ಕೆ ಏರಿಸಿತು. ಅಲ್ಲದೆ ಈ ಸಿಕ್ಸರ್ನ ಮೌಲ್ಯ ವಿಶ್ಲೇಷಣಾತ್ಮಕವಾಗಿ ಸುಮಾರು ₹99 ಲಕ್ಷ ಎಂದು ಅಂದಾಜಿಸಲಾಗಿದೆ! ಅಂದರೆ ದಶಕದ ಬಳಿಕ ಭುವಿ ಬ್ಯಾಟ್ನಿಂದ ಸಿಡಿದ ಸಿಕ್ಸ್ ಇದೀಗ 99 ಲಕ್ಷ ರೂ. ಮೌಲ್ಯದ್ದು ಎಂಬುದು ವಿಶೇಷ.
WHAT ON EARTH HAVE WE JUST WITNESSED! 🤯
Bhuvneshwar Kumar & Rasikh Dar, take a bow ❤️
Updates ▶️ https://t.co/wYlCB10dhm#TATAIPL | #KhelBindaas | #RCBvMI | @RCBTweets pic.twitter.com/tqkuPMEsHR
— IndianPremierLeague (@IPL) May 10, 2026
4 ಸಿಕ್ಸರ್ಗಳು:
ಕ್ರಿಕೆಟ್ ಲೋಕದಲ್ಲಿ ಭುವನೇಶ್ವರ್ ಕುಮಾರ್ ಒಬ್ಬ ಪರಿಣಿತ ಬೌಲರ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಐಪಿಎಲ್ ಇತಿಹಾಸದಲ್ಲಿ ಅವರು ಸಿಕ್ಸರ್ ಸಿಡಿಸುವುದು ಒಂದು ಅಪರೂಪದ ವಿದ್ಯಮಾನ. 2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುವಾಗ ಕೊನೆಯ ಬಾರಿಗೆ ಸಿಕ್ಸರ್ ಬಾರಿಸಿದ್ದ ಭುವಿ, ಆ ಬಳಿಕ ಬೌಂಡರಿಗಳನ್ನಷ್ಟೇ ನಂಬಿದ್ದರು. ಆದರೆ ಮೇ 10, 2026 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ಬರೊಬ್ಬರಿ 10 ವರ್ಷಗಳ ನಂತರ ಭುವಿ ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅಲ್ಲದೆ ಈವರೆಗೆ ಅವರು ಐಪಿಎಲ್ನಲ್ಲಿ ಬಾರಿಸಿರುವುದು ಕೇವಲ 4 ಸಿಕ್ಸರ್ಗಳು ಮಾತ್ರ. ಆ ಸಿಕ್ಸರ್ಗಳ ವಿವರ ಈ ಕೆಳಗಿನಂತಿದೆ…
-
- 2013: ಪುಣೆ ವಾರಿಯರ್ಸ್ ಪರ (1 ಸಿಕ್ಸರ್)
- 2015: ಸನ್ರೈಸರ್ಸ್ ಹೈದರಾಬಾದ್ ಪರ (1 ಸಿಕ್ಸರ್)
- 2016: ಸನ್ರೈಸರ್ಸ್ ಹೈದರಾಬಾದ್ ಪರ (1 ಸಿಕ್ಸರ್)
- 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ (1 ಸಿಕ್ಸರ್)
‘ಪರ್ಪಲ್’ ಮಿಂಚು:
ಬ್ಯಾಟಿಂಗ್ನಲ್ಲಿ ಮಿಂಚುವುದಕ್ಕೂ ಮುನ್ನ, ಭುವನೇಶ್ವರ್ ತಮ್ಮ ಪ್ರಧಾನ ಕೆಲಸವಾದ ಬೌಲಿಂಗ್ನಲ್ಲೂ ಕಿಚ್ಚು ಹಚ್ಚಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ಭುವಿ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈ ಮೂಲಕ ಒಟ್ಟು 21 ವಿಕೆಟ್ಗಳೊಂದಿಗೆ ಅವರು ಈ ಸೀಸನ್ನ ‘ಪರ್ಪಲ್ ಕ್ಯಾಪ್’ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.