ದಾಖಲೆ ಬರೆದ ಕಲಬುರಗಿ ಬಿಸಿಲು: ಆರೆಂಜ್ ಅಲಟ್೯ ಘೋಷಣೆ, ಈ ಸಮಯದಲ್ಲಿ ಹೊರಬಾರದಂತೆ ಸೂಚನೆ – Kannada News | Extreme Heat Alert in Kalyana Karnataka Districts: Orange Alert, advice not to venture out during this time

ಕಲಬುರಗಿ, ಏಪ್ರಿಲ್​ 16: ಕಲಬುರಗಿ (kalaburagi) ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ. ಇದೀಗ ರಣಬಿಸಿಲಿನ (Heatwave) ಕೇಂದ್ರವಾಗಿಯೂ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಇದೀಗ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಜನರು ಮನೆ ಬಿಟ್ಟು ಹೊರಬರಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಜಿಲ್ಲೆಯಲ್ಲಿ ಬರೋಬ್ಬರಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ರಣಬಿಸಿಲಿನ ಹೊಡೆತಕ್ಕೆ ತತ್ತರಿಸಿದ ಜಿಲ್ಲೆಯ ಜನ 

ಕಲಬುರಗಿ ಅದುವೆ ಕಲ್ಯಾಣ ಕರ್ನಾಟಕದ ಕೇಂದ್ರ ಭಾಗ. ರಣಬಿಸಿಲಿನ ಹೊಡೆತಕ್ಕೆ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಬೇಸಿಗೆ ಆರಂಭ ಬಳಿಕ ರಾಜ್ಯದಲ್ಲಿಯೇ ಅತಿ ಹೆಚ್ಚು ‌ಬಿಸಿಲು ಜಿಲ್ಲೆಯಲ್ಲಿ ದಾಖಲಾಗಿದೆ. ಇದು ಜನರನ್ನು ಬೆಚ್ಚಿಬಿಳಿಸಿದೆ. ನಿನ್ನೆಯಷ್ಟೆ ಕಲಬುರಗಿ ತಾಲೂಕಿನ ಔರಾದನಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದು ಯಾರೋ ಹೇಳುತ್ತಿರುವ ಮಾತಲ್ಲ, ಹವಾಮಾನ ಇಲಾಖೆಯೇ ನೀಡಿರುವ ಮಾಹಿತಿ.

ಇದನ್ನೂ ಓದಿ: ಬಿಸಿಲಿನ ಬೇಗೆಗೆ ಬೆಂದ ಕರ್ನಾಟಕ: ಬೆಂಗಳೂರು ಸೇರಿ ವಿವಿಧೆಡೆ ಹೀಟ್‌ವೇವ್ ಅಲರ್ಟ್

ಬಿಸಿಲೂರು ಎಂದೇ ಎಂದು ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಇದೇ ವಾರದಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದೆ. ಹೀಗಾಗಿ ಬಿಸಿಲಿನ ಝಳಕ್ಕೆ ಕೆಲಸಕ್ಕೆ ಹೋಗುವ ಜನರು ಭಯಭೀತಗೊಂಡಿದ್ದಾರೆ. ಕೆಲ ಜನರು ತಂಪು ಪಾನಿಯಗಳ ಮೊರೆ ಹೋಗ್ತಿದ್ದಾರೆ. ನಿಂಬೆ ಹಣ್ಣಿನ ರಸ, ಕಬ್ಬಿನ ಹಾಲು, ತೆಂಗಿನಕಾಯಿ ನೀರು, ಸೇರಿದಂತೆ ಕಲ್ಲಂಗಡಿ ಹಣ್ಣಿನ ಸೇವನೆ ಮಾಡ್ತಿದ್ದಾರೆ. ಬಿರು ಬಿಸಿಲಿನ ಹೊಡೆತಕ್ಕೆ ಸರ್ಕಾರಿ ಕಚೇರಿಯ ಸಮಯದಲ್ಲಿಯೂ ಸಹ ಬದಲಾವಣೆ ಮಾಡಲಾಗಿದೆ. ಆದರೆ ಜನ ಮಾತ್ರ ಪಾರ್ಕ್​​ಗಳಲ್ಲಿನ ಗಿಡ ಮರಗಳ ನೆರಳಿನ ಆಶ್ರಯ ಪಡೆಯುತ್ತಿದ್ದಾರೆ.

ಕಲಬುರಗಿಯಲ್ಲಿ ಬಿಸಿಲಿನ ತಾಪಮಾನ ದಿನದಿಂದದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಜನ ತತ್ತರಿಸಿ ಹೋಗ್ತಿದ್ದಾರೆ. ಔರಾದನಲ್ಲಿ 45 ಡಿಗ್ರಿ ಸೆಲ್ಸಿಯಸ್, ಚಿಂಚೋಳಿ ತಾಲೂಕಿನ ಐನಾಪೂರದಲ್ಲಿ 44 ಡಿಗ್ರಿ ಸೆಲ್ಸಿಯಸ್, ಅಫಜಲಪುರ ತಾಲೂಕಿನ ಆನೂರ್​ನಲ್ಲಿ 44 ಸೆಲ್ಸಿಯಸ್, ಆಳಂದ ತಾಲೂಕಿನ ಮಾದನಹಿಪ್ಪರಗಾದಲ್ಲಿ 44 ಡಿಗ್ರಿ ಸೆಲ್ಸಿಯಸ್ ಹೀಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಹೆಚ್ಚಿನ ತಾಪಮಾನ ದಾಖಲಾಗ್ತಿದೆ.

ಮನೆಯಿಂದ ಹೊರಹೋಗದಂತೆ ಆದೇಶ

ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ಕೆಲವು ದಿನ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ. ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೂ ಮನೆಯಿಂದ ಹೊರಹೋಗುವುದನ್ನು ತಪ್ಪಿಸಬೇಕಿದೆ‌. ಬಿಸಿ ಗಾಳಿ ಬೀಸುತ್ತಿರುವ ಹಿನ್ನಲೆ ಈಗಾಗಲೇ ಆರೇಂಜ್ ಅಲಟ್೯ ಘೋಷಣೆ ಸಹ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಂ ಆದೇಶ ಹೊರಡಿಸಿದ್ದಾರೆ.

ಆರೋಗ್ಯದ ಮೇಲೂ ಪರಿಣಾಮ

ಬಿಸಿಲಿನ ಪರಿಣಾಮ ಆರೋಗ್ಯದ ಮೇಲೂ ಗಂಭಿರ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರಲ್ಲಿ ಡಿಹೈಡ್ರೇಶನ್ ಉಂಟಾಗಿ ವಾಂತಿ, ಭೇದಿ ಸೇರಿದಂತೆ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಸುಡು ಬಿಸಿಲಿಗೆ ಬೆಂದ ಕರ್ನಾಟಕ: ಬೆಂಗಳೂರಿನಲ್ಲಿ ದಾಖಲೆ ಬರೆದ ತಾಪಮಾನ

ಇನ್ನು ಪ್ರತಿ ಬಾರಿಗಿಂತ ಈ ಬಾರಿ ಸಹ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಮುಂದಿನ ತಿಂಗಳು ಮೇ ಇನ್ನೂ ‌ಹೆಚ್ಚಿನ ಗರಿಷ್ಠ ಮಟ್ಟದ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇವಲ ಕಲಬುರಗಿ ಅಷ್ಟೇ ಅಲ್ಲದೆ ಯಾದಗಿರಿ, ರಾಯಚೂರು, ಬೀದರ್, ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಸೂರ್ಯನ ಪ್ರಖರತೆಗೆ ಜಿಲ್ಲೆಯ ಜನ ತತ್ತರಿಸಿರುವುದಂತು ನಿಜ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *