ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ಭದ್ರಕೋಟೆಯಲ್ಲೇ ಅಹಿಂದ ದಾಳ ಉರುಳಿಸಿದ ಬಿಜೆಪಿ! ಜಾತಿ ಲೆಕ್ಕಾಚಾರ ಹೇಗಿದೆ ಗೊತ್ತೇ?

ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ಭದ್ರಕೋಟೆಯಲ್ಲೇ ಅಹಿಂದ ದಾಳ ಉರುಳಿಸಿದ ಬಿಜೆಪಿ! ಜಾತಿ ಲೆಕ್ಕಾಚಾರ ಹೇಗಿದೆ ಗೊತ್ತೇ?

ದಾವಣಗೆರೆ, ಮಾರ್ಚ್ 20: ದಾವಣಗೆರೆ ದಕ್ಷಿಣದ ಉಪಚುನಾವಣೆ (Davanagere By-Election) ಕಣ ಈಗ ಜಾತಿ ರಾಜಕಾರಣದಿಂದ ರಂಗೇರುವ ಸುಳಿವು ದೊರೆತಿದೆ. ಕಾಂಗ್ರೆಸ್‌ನಲ್ಲಿ (Congress) ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಮುಸ್ಲಿಂ ನಾಯಕರ ನಡುವೆ ಟಿಕೆಟ್ ಫೈಟ್ ಜೋರಾಗಿದೆ. ಇದೇ ಸಮಯವನ್ನು ಸರಿಯಾಗಿ ಬಳಸಿಕೊಂಡಿರುವ ಬಿಜೆಪಿ (BJP), ಕಾಂಗ್ರೆಸ್‌ನ ಭದ್ರಕೋಟೆಯಲ್ಲೇ ಅಹಿಂದ ದಾಳ ಉರುಳಿಸಿದೆ. ಅಹಿಂದ ಸಮುದಾಯಕ್ಕೆ ಮಣೆ ಹಾಕುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಕನ್ನ ಹಾಕಲು ತಂತ್ರ ರೂಪಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರ ಎಂದರೆ ಶಾಮನೂರು ಕುಟುಂಬದ ಪ್ರಭಾವದ ಪ್ರದೇಶ. ಆದರೆ ಇದೀಗ ಇಲ್ಲಿ ಅಲ್ಪಸಂಖ್ಯಾತರು ಬಂಡಾಯದ ಸ್ವರ ಎತ್ತಿದ್ದಾರೆ. ‘ನಮ್ಮ ಮತ ಬೇಕು, ಆದರೆ ನಮಗೆ ಅಧಿಕಾರ ಬೇಡವೇ’ ಎಂಬ ಪ್ರಶ್ನೆಯನ್ನು ಮುಸ್ಲಿಂ ಮುಖಂಡರು ಮುಂದಿಟ್ಟಿದ್ದಾರೆ. ಕಾಂಗ್ರೆಸ್ ಲಿಂಗಾಯತ ವರ್ಸಸ್ ಮುಸ್ಲಿಂ ಒಳಜಗಳದಲ್ಲಿ ತೊಡಗಿರುವಾಗ, ಬಿಜೆಪಿ ಶಾಂತವಾಗಿ ತನ್ನ ದಾಳವನ್ನು ಉರುಳಿಸಿದೆ.

ದಾವಣಗೆರೆಯಲ್ಲಿ ನಿರ್ಣಾಯಕವಾಗಿರುವ ಹಿಂದುಳಿದ ವರ್ಗಗಳು ಮತ್ತು ದಲಿತ ಮತಗಳನ್ನು ಸೆಳೆಯಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಈ ಬಾರಿ ಅಹಿಂದ ಸಮುದಾಯದ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಇದರ ಮೂಲಕ ಕಾಂಗ್ರೆಸ್ ಮತಗಳನ್ನು ವಿಭಜಿಸಿ, ಶಾಮನೂರು ಕೋಟೆಯನ್ನು ಭೇದಿಸುವುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಇನ್ನೂ ಜಿಲ್ಲೆಯಲ್ಲಿ ಬಿಜೆಪಿ ಒಳಗೇ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಬಣ ಮತ್ತು ಶಾಸಕ ಎಂ.ಪಿ. ರೇಣುಕಾಚಾರ್ಯ ಬಣದ ನಡುವೆ ಭಿನ್ನಮತಗಳಿದ್ದವು. ಈ ಹಿನ್ನೆಲೆ ರಾಜ್ಯ ನಾಯಕರು ಎರಡೂ ಬಣಗಳಿಗೂ ಸಮನಾಗಿ ಹೊಂದಿಕೊಂಡಿರುವ ಶ್ರೀನಿವಾಸ್ ದಾಸ್ ಕರಿಯಪ್ಪ ಹೆಸರನ್ನು ಅಂತಿಮಗೊಳಿಸಿ ಒಗ್ಗಟ್ಟು ಸಾಧಿಸಲು ಪ್ರಯತ್ನಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಜಾತಿ ಲೆಕ್ಕಾಚಾರ

ದಾವಣಗೆರೆ ದಕ್ಷಿಣ ಕ್ಷೇತ್ರದ ಜಾತಿ ಲೆಕ್ಕಾಚಾರ ಗಮನಿಸಿದರೆ, ಇಲ್ಲಿ ಅಹಿಂದ ಮತಗಳೇ ಪ್ರಮುಖವಾಗಿವೆ. ಒಟ್ಟು 2,31,674 ಮತದಾರರಿದ್ದಾರೆ. ಇವರಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ – 64,246, ಲಿಂಗಾಯತರು – 37,845, ಎಸ್‌ಟಿ (ನಾಯಕರು) – 31,729, ಎಸ್‌ಸಿ (ಎಲ್ಲಾ ಒಳಜಾತಿಗಳು) – 29,106, ಕುರುಬ – 16,854, ಮರಾಠರು – 14,868, ಉಪ್ಪಾರರು – 8,352, ಜೈನರು – 5,386 ಹಾಗೂ ಇತರ ಸಮುದಾಯಗಳ 23,300 ಮತಗಳಿವೆ.

ಅಹಿಂದ ಸಮುದಾಯವೇ ನಿರ್ಣಾಯಕ

ಈ ಪೈಕಿ ಅಹಿಂದ ಸಮುದಾಯವೇ ನಿರ್ಣಾಯಕವಾಗಿದೆ. ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರು ಮತ್ತು ಶಾಮನೂರು ಕುಟುಂಬದ ನಡುವೆ ನಡೆಯುತ್ತಿರುವ ಟಿಕೆಟ್ ಪೈಪೋಟಿ ಪಕ್ಷಕ್ಕೆ ತಲೆನೋವಾಗಿದ್ದು, ಈ ಒಳಜಗಳದ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ‘ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ’ ಎಂಬಂತೆ ಈ ಬಾರಿ ರಾಜಕೀಯ ಸಮೀಕರಣ ಬದಲಾಗುತ್ತದೆಯೇ ಎನ್ನುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಬೈ ಎಲೆಕ್ಷನ್ ಕದನ: ಬಾಗಲಕೋಟೆ ಕೈ ಅಭ್ಯರ್ಥಿ ಬಹುತೇಕ ಫೈನಲ್, ದಾವಣಗೆರೆಯಿಂದಲೇ ವಿಳಂಬ

ಒಟ್ಟಿನಲ್ಲಿ, ಕಾಂಗ್ರೆಸ್‌ನ ಒಳಜಗಳ ಮತ್ತು ಲಿಂಗಾಯತ–ಮುಸ್ಲಿಂ ಮತಗಳ ವಿಭಜನೆಯ ಲಾಭ ಪಡೆಯಲು ಬಿಜೆಪಿ ಸಜ್ಜಾಗಿದೆ. ಬಿಜೆಪಿಯ ಈ ಅಹಿಂದ ತಂತ್ರಕ್ಕೆ ಮತದಾರರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ? ಶಾಮನೂರು ಕೋಟೆ ಉಳಿಯುತ್ತದೆಯೇ ಅಥವಾ ಅಹಿಂದ ಅಲೆಗೆ ಉರುಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *