ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರು ಇತ್ತೀಚೆಗೆ ಯುವ ದಾಂಡಿಗ ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ವೈಭವ್ ಆಟವು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಮಟ್ಟದಲ್ಲಿದೆ ಎಂದು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಯುವ ದಾಂಡಿಗನಿಗೆ ಕಿವಿಮಾತು ಕೂಡ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ವೈಭವ್ ಸೂರ್ಯವಂಶಿ ಅವರಲ್ಲಿರುವ ಪ್ರತಿಭೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಮಟ್ಟದಲ್ಲಿದೆ. ಆತನ ನೈಸರ್ಗಿಕ ಆಟವೇ ಆತನ ಸಾಮರ್ಥ್ಯ ಎಂದು ಕಪಿಲ್ ದೇವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ ಅವನಿಗೆ ಈಗಲೇ ಅತಿಯಾದ ಪ್ರಚಾರವನ್ನು ನೀಡಬೇಡಿ. ಈ ಮೂಲಕ ಒತ್ತಡವನ್ನು ಹಾಕಬೇಡಿ. ಮುಕ್ತವಾಗಿ ಉಸಿರಾಡಲು ಬಿಡಿ ಎಂದು ಕಪಿಲ್ ಮಾಧ್ಯಮ ಹಾಗೂ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ಅತಿಯಾದ ನಿರೀಕ್ಷೆಗಳು ಯುವ ಆಟಗಾರನ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ವೈಭವ್ ಸೂರ್ಯವಂಶಿಗೆ ಈಗಲೇ ಅತಿಯಾದ ಪ್ರಚಾರ ನೀಡಬಾರದು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡದಿರುವ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕಪಿಲ್ ದೇವ್, ಅವನು ಸಿದ್ಧನಾಗಿದ್ದರೆ, ತಂಡದಲ್ಲಿ ಅವಕಾಶ ನೀಡಿ. ಆಡಲು ಬಿಡಿ. ವಯಸ್ಸನ್ನು ಪರಿಗಣಿಸದೆ ಪ್ರತಿಭೆಗೆ ತಕ್ಕಂತೆ ಭಾರತ ತಂಡದಲ್ಲಿ ಅವಕಾಶ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ವೈಭವ್ಗೆ ಕಿವಿಮಾತು:
ಐಪಿಎಲ್ ಮತ್ತು ಟಿ20 ಮಾದರಿಯಲ್ಲಿ ವೈಭವ್ ಸೂರ್ಯವಂಶಿ ಅದ್ಭುತವಾಗಿ ಆಡಿದ್ದರೂ, ಒಬ್ಬ ಕ್ರಿಕೆಟಿಗನ ನಿಜವಾದ ಯಶಸ್ಸು ಮತ್ತು ಪರಂಪರೆ ನಿರ್ಧಾರವಾಗುವುದು ಟೆಸ್ಟ್ ಕ್ರಿಕೆಟ್‌ನಲ್ಲಿ. ಹೀಗಾಗಿ ವೈಭವ್ ಮುಂದೆ ಟೆಸ್ಟ್ ಕ್ರಿಕೆಟ್ನತ್ತ ಹೆಚ್ಚು ಗಮನ ಹರಿಸಬೇಕು ಎಂದು ಕಪಿಲ್ ದೇವ್ ಕಿವಿಮಾತು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 15 ವರ್ಷದ ವೈಭವ್ ಸೂರ್ಯವಂಶಿ ಅವರಲ್ಲಿ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗುವ ಎಲ್ಲಾ ಲಕ್ಷಣಗಳೂ ಇವೆ. ಕಪಿಲ್ ದೇವ್ ಅವರ ಈ ಮಾರ್ಗದರ್ಶನ ಮತ್ತು ಎಚ್ಚರಿಕೆಯ ಮಾತುಗಳು ಯುವ ಆಟಗಾರನನ್ನು ಅನಗತ್ಯ ಒತ್ತಡದಿಂದ ಕಾಪಾಡಲು ಅತ್ಯಂತ ಅವಶ್ಯಕವಾಗಿವೆ.
ಇದನ್ನೂ ಓದಿ: ಜೂನ್ 28… ಭಾರತೀಯ ಕ್ರಿಕೆಟ್ ಇತಿಹಾಸದ ‘ಅತ್ಯಂತ ಕೆಟ್ಟ ದಿನ’!
ಅತಿಯಾದ ಪ್ರಚಾರದ ಬದಲು ಅವರಿಗೆ ಮುಕ್ತವಾಗಿ ಆಡುವ ವಾತಾವರಣ ನಿರ್ಮಿಸಿಕೊಟ್ಟರೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಂತೆ ವೈಭವ್ ಸೂರ್ಯವಂಶಿ ಕೂಡ ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
Vaib
Published On – 5:31 pm, Sat, 4 July 26
