ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಬದಲಾವಣೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಆದರೆ ಪ್ರತಿದಿನ ಒಂದು ಮುಷ್ಟಿ ಕಡಲೆಕಾಯಿ (Peanuts) ಸೇವಿಸುವುದರಿಂದ ಹೃದಯದ ಆರೋಗ್ಯವನ್ನು (Heart Health) ಕಾಪಾಡಿಕೊಳ್ಳಲು ಸಹಾಯವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಡಲೆಕಾಯಿಯಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್, ನಾರಿನಾಂಶ, ಮೆಗ್ನೀಷಿಯಂ ಹಾಗೂ ಪೊಟ್ಯಾಸಿಯಂ ಸಮೃದ್ಧವಾಗಿದ್ದು ನಮ್ಮ ಆರೋಗ್ಯಕ್ಕೆ ಬಹಳ ಸಹಾಯಕಾರಿ. ಹಾಗಾದರೆ ಇದರಿಂದ ಯಾವ ರೀತಿ ಅನುಕೂಲವಿದೆ, ಹೇಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಧಮನಿಗಳಲ್ಲಿ ಕೊಬ್ಬು ಜಮೆಯಾಗುವುದನ್ನು ತಡೆಯಬಹುದು
ಹೃದಯಕ್ಕೆ ರಕ್ತ ಪೂರೈಸುವ ಧಮನಿಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಜಮೆಯಾಗುವುದನ್ನು ಪ್ಲಾಕ್ ಎಂದು ಕರೆಯಲಾಗುತ್ತದೆ. ಇದು ರಕ್ತನಾಳಗಳನ್ನು ಕಿರಿದಾಗಿಸಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಆದರೆ ಕಡಲೆಕಾಯಿಯಲ್ಲಿರುವ ಮೊನೋ ಅನ್‌ಸ್ಯಾಚುರೇಟೆಡ್ ಮತ್ತು ಪಾಲಿ ಅನ್‌ಸ್ಯಾಚುರೇಟೆಡ್ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಕಡಲೆಕಾಯಿಯಲ್ಲಿರುವ ಮೆಗ್ನೀಷಿಯಂ ಮತ್ತು ಪೊಟ್ಯಾಸಿಯಂ ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತವೆ. ಜೊತೆಗೆ ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇದನ್ನೂ ಓದಿ: ಪ್ರತಿದಿನ ಕೇವಲ 2 ಲವಂಗ ತಿಂದು ನೋಡಿ! ನಿಮಗೆ ಈ ಆರೋಗ್ಯ ಸಮಸ್ಯೆಯೇ ಬರಲ್ಲ
ತೂಕ ನಿಯಂತ್ರಣಕ್ಕೂ ಸಹಕಾರಿ
ಕಡಲೆಕಾಯಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವುದರಿಂದ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ತೂಕ ನಿಯಂತ್ರಣದಲ್ಲಿದ್ದರೆ ಹೃದಯದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.
ಹೇಗೆ ಸೇವಿಸಬೇಕು?
ಪ್ರತಿದಿನ ಸುಮಾರು 25– 30 ಗ್ರಾಂ ಕಡಲೆಕಾಯಿ ಸೇವಿಸುವುದು ಸಾಕು. ಎಣ್ಣೆಯಲ್ಲಿ ಕರಿದ ಅಥವಾ ಹೆಚ್ಚು ಉಪ್ಪು ಹಾಕಿದ ಕಡಲೆಕಾಯಿಗಿಂತ ನೆನೆಸಿದ ಅಥವಾ ಡ್ರೈ ರೋಸ್ಟ್ ಮಾಡಿದ ಕಡಲೆಕಾಯಿ ಹೆಚ್ಚು ಆರೋಗ್ಯಕರ. ಮಧುಮೇಹ ಅಥವಾ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಇರುವವರು ತಮ್ಮ ದೈನಂದಿನ ಆಹಾರದಲ್ಲಿ ಕಡಲೆಕಾಯಿಯನ್ನು ಸೇರಿಸಿಕೊಳ್ಳಬಹುದು.
ಸೂಚನೆ: ಕಡಲೆಕಾಯಿ ಆರೋಗ್ಯಕರ ಆಹಾರವಾದರೂ, ಇದು ಯಾವುದೇ ಕಾಯಿಲೆಗೆ ನೇರ ಔಷಧವಲ್ಲ. ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ ಸೇವಿಸಿದಾಗ ಹೆಚ್ಚಿನ ಪ್ರಯೋಜನ ದೊರೆಯುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ