ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರಿಗೆ (Christopher Nolan) ಭಾರತದಲ್ಲೂ ಭಾರಿ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಪ್ರತಿ ಸಿನಿಮಾಗಳಿಗೂ ಇಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತವೆ ಹಾಗೂ ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ಇದೀಗ ಭಾರತದ ಅಭಿಮಾನಿಗಳನ್ನು ಮತ್ತಷ್ಟು ಖುಷಿಪಡಿಸಲು ನೋಲನ್ ಅವರು ಇದೇ ಮೊದಲ ಬಾರಿಗೆ ತಮ್ಮ ಸಿನಿಮಾವೊಂದರ ಪ್ರಚಾರಕ್ಕಾಗಿ ಮುಂಬೈಗೆ ಲಗ್ಗೆ ಇಡುತ್ತಿದ್ದಾರೆ.
‘ದಿ ಒಡಿಸ್ಸಿ’ ಸಿನಿಮಾನ ಕ್ರಿಸ್ಟೋಫರ್ ನೋಲನ್ ನಿರ್ದೇಶನ ಮಾಡಿದ್ದಾರೆ. ಜುಲೈ 17ರಂದು ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ವಿಶ್ವ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅದರ ಭಾಗವಾಗಿ ತಂಡ ಮುಂಬೈಗೆ ಬರುತ್ತಿದೆ. ಯೂನಿವರ್ಸಲ್ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜುಲೈ ತಿಂಗಳಿನಲ್ಲಿ ಮುಂಬೈನಲ್ಲಿ ‘ದಿ ಒಡಿಸ್ಸಿ’ ಚಿತ್ರದ ಭವ್ಯ ಪ್ರೀಮಿಯರ್ ಶೋ ಆಯೋಜಿಸಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕ್ರಿಸ್ಟೋಫರ್ ನೋಲನ್ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ನೋಲನ್ ಜೊತೆಗೆ ಹಾಲಿವುಡ್‌ನ ಖ್ಯಾತ ನಟರಾದ ಮ್ಯಾಟ್ ಡಮನ್, ಟಾಮ್ ಹಾಲೆಂಡ್ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕಿ ಎಮ್ಮಾ ಥಾಮಸ್ ಕೂಡ ಮುಂಬೈಗೆ ಆಗಮಿಸುತ್ತಿದ್ದಾರೆ. ಮುಂಬೈನ ಫೀನಿಕ್ಸ್ ಪಲ್ಲಾಡಿಯಮ್‌ನಲ್ಲಿರುವ ಪಿವಿಆರ್ ಐಕಾನ್ ಐಮ್ಯಾಕ್ಸ್ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಲಂಡನ್, ಪ್ಯಾರಿಸ್ ಮತ್ತು ನ್ಯೂಯಾರ್ಕ್‌ನಂತಹ ವಿಶ್ವದ ಪ್ರಮುಖ ನಗರಗಳ ಸಾಲಿನಲ್ಲಿ ಈಗ ಮುಂಬೈ ಕೂಡ ಸೇರ್ಪಡೆಯಾಗಿದ್ದು, ಈ ಈವೆಂಟ್ ಭಾರತದ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಾಲಿವುಡ್ ಕಾರ್ಯಕ್ರಮವಾಗಿ ಮೂಡಿಬರಲಿದೆ.
ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿರುವ ‘ದಿ ಒಡಿಸ್ಸಿ’
ನೋಲನ್ ಅವರ ಈ ಹಿಂದಿನ ‘ಓಪನ್ ಹೈಮರ್’ ಸಿನಿಮಾ ಬರೋಬ್ಬರಿ 7 ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡು ಜಾಗತಿಕವಾಗಿ ಸಖತ್ ಸೌಂಡ್ ಮಾಡಿತ್ತು. ಅದರ ಬೆನ್ನಲ್ಲೇ ಬರುತ್ತಿರುವ ‘ದಿ ಒಡಿಸ್ಸಿ’ ಮೇಲೆ ಭಾರಿ ನಿರೀಕ್ಷೆಗಳಿವೆ. ಹೋಮರ್ ಅವರ ಪ್ರಸಿದ್ಧ ಇತಿಹಾಸ ಪ್ರಸಿದ್ಧ ಮಹಾಕಾವ್ಯವನ್ನು ಆಧರಿಸಿ ಈ ಸಿನಿಮಾವನ್ನು ಸಿದ್ಧಪಡಿಸಲಾಗಿದೆ. ಟ್ರಾಯ್ ನಗರದ ಪತನದ ನಂತರ ‘ಒಡಿಸ್ಸಿಯಸ್’ ಎಂಬ ನಾಯಕ ಹತ್ತು ವರ್ಷಗಳ ಕಾಲ ನಡೆಸುವ ಅಪಾಯಕಾರಿ ಸಾಹಸದ ಪ್ರಯಾಣದ ಕಥೆ ಇದರಲ್ಲಿದೆ.
ತಾಂತ್ರಿಕವಾಗಿಯೂ ಈ ಸಿನಿಮಾ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದೆ. ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ವಿಶ್ವದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಇನ್ನು ಚಿತ್ರದಲ್ಲಿ ಮ್ಯಾಟ್ ಡಮನ್, ಟಾಮ್ ಹಾಲೆಂಡ್ ಜೊತೆಗೆ ಅನ್ ಹ್ಯಾಥ್‌ವೇ, ರಾಬರ್ಟ್ ಪ್ಯಾಟಿನ್ಸನ್, ಜೆಂಡಾಯಾ ಮತ್ತು ಚಾರ್ಲಿಜ್ ಥೆರಾನ್ ಅವರಂತಹ ಸ್ಟಾರ್ ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾದ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೂ ಅಧಿಕ
ಭಾರತದಾದ್ಯಂತ ಈ ಚಿತ್ರದ ಐಮ್ಯಾಕ್ಸ್ ಸ್ಕ್ರೀನಿಂಗ್‌ಗಳ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ನೋಲನ್ ಅವರ ಹೊಸ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಭಾರತೀಯ ಚಿತ್ರಪ್ರೇಮಿಗಳು ಕಾತರರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
