‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್​​ಗೆ ಅರ್ಜಿ: ನೋಟಿಸ್ ಜಾರಿ – Kannada News | The Kerala Story 2 controversy: HC issues notice to CBFC and movie team

‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾಗೆ ಸಂಬಂಧಿಸಿದ ವಿವಾದ ಹೆಚ್ಚಾಗುತ್ತಲೇ ಇದೆ. ಈ ಸಿನಿಮಾದಲ್ಲಿ ಕೋಮುವಾದದ ಅಂಶಗಳು ಇವೆ ಎಂಬ ಕಾರಣದಿಂದ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೇರಳದಲ್ಲಿ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಿನಿಮಾ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅದರ ಬೆನ್ನಲ್ಲೇ ಸಿನಿಮಾದ ಬಿಡುಗಡೆಗೆ ತಡೆ ಕೋರಿ ಕೇರಳ ಹೈಕೋರ್ಟ್​​ಗೆ (Kerala High Court) ಅರ್ಜಿ ಸಲ್ಲಿಸಲಾಗಿದೆ. ಇದರಿಂದ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

ಕಣ್ಣೂರಿನ ಶ್ರೀದೇವ್ ಎಂಬುವರು ‘ದಿ ಕೇರಳ ಸ್ಟೋರಿ 2’ ಸಿನಿಮಾ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಿನಿಮಾದಲ್ಲಿ ಕೋಮು ಗಲಭೆಗೆ ಕಾರಣ ಆಗುವಂತಹ ಅಂಶಗಳು ಇವೆ. ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಬಹುದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಈ ಸಿನಿಮಾಗೆ ಪ್ರಮಾಣಪತ್ರ ನೀಡಿರುವ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಕೂಡ ಪ್ರಶ್ನಿಸಲಾಗಿದೆ.

ಕೇರಳದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡಲಾಗುತ್ತಿದೆ ಹಾಗೂ ಅವರಿಗೆ ಹಿಂಸೆ ನೀಡಲಾಗುತ್ತಿದೆ ಎಂಬುದನ್ನು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಟ್ರೇಲರ್​​ನಲ್ಲಿ ತೋರಿಸಲಾಗಿದೆ. ಆದರೆ ಇದನ್ನು ಅನೇಕರು ವಿರೋಧಿಸಿದ್ದಾರೆ. ಅರ್ಜಿ ಸ್ವೀಕರಿಸಿರುವ ನ್ಯಾಯಾಲಯವು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದೆ.

ಈ ಕುರಿತಂತೆ ಫೆಬ್ರವರಿ 24ರಂದು ವಿಚಾರಣೆ ನಡೆಯಲಿದೆ. ಆದರೆ ಫೆಬ್ರವರಿ 27ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಒಂದು ವೇಳೆ ಫೆ.24ರಂದು ವಿಚಾರಣೆಯಲ್ಲಿ ಚಿತ್ರತಂಡಕ್ಕೆ ಹಿನ್ನಡೆ ಆದರೆ ರಿಲೀಸ್​​ಗೆ ತೊಂದರೆ ಆಗಲಿದೆ. ಸದ್ಯ ಶುರು ಆಗಿರುವ ವಿವಾದದ ಬಗ್ಗೆ ಚಿತ್ರತಂಡದವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್

ಕಾಮಾಕ್ಯ ನಾರಾಯಣ್ ಸಿಂಗ್ ಅವರು ‘ದಿ ಕೇರಳ ಸ್ಟೋರಿ 2’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್​ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅದಿತಿ ಭಾಟಿಯಾ, ಐಶ್ವರ್ಯಾ ಊಜಾ, ಉಲ್ಕಾ ಗುಪ್ತಾ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. 2023ರಲ್ಲಿ ತೆರೆಗೆ ಬಂದಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾದ ಸೀಕ್ವೆಲ್ ಆಗಿ ಈ ಚಿತ್ರ ಸಿದ್ಧವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *