ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ (Ranveer Singh) ಈಗ ಎರಡನೇ ಮಗುವಿನ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ. ತಮ್ಮ ಪುತ್ರಿ ದುವಾ (Dua) ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಯನ್ನು ಅವರಿಬ್ಬರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಈ ಜೋಡಿ, ಶೀರ್ಷಿಕೆಯಲ್ಲಿ ಸರಳವಾಗಿ ‘ದೃಷ್ಟಿ ತಗುಲದಿರಲಿ’ ಎಂಬ ಅರ್ಥ ನೀಡುವ ಎಮೋಜಿಗಳನ್ನು ಬಳಸಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಈ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳ ಮಳೆ ಸುರಿಸಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018ರಲ್ಲಿ ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ದಂಪತಿಗೆ 2024ರ ಸೆಪ್ಟೆಂಬರ್ 8ರಂದು ಮೊದಲ ಪುತ್ರಿ ದುವಾ ಜನಿಸಿದಳು. ಇದೇ ವರ್ಷ ನವೆಂಬರ್ ತಿಂಗಳಲ್ಲಿ ಮಗಳ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಈಗ ದುವಾಳಿಗೆ ಒಬ್ಬ ತಮ್ಮ ಅಥವಾ ತಂಗಿ ಬರಲಿರುವ ಸುದ್ಧಿ ಮನೆಮಂದಿಯಲ್ಲಿ ಸಂಭ್ರಮ ತಂದಿದೆ.
ಪ್ರಸ್ತುತ ರಣವೀರ್ ಸಿಂಗ್ ಅವರು ತಮ್ಮ ಇತ್ತೀಚಿನ ಚಿತ್ರ ‘ಧುರಂಧರ್ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಾದರೂ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ನಿಂತು ದಾಖಲೆಗಳನ್ನು ಬರೆಯುತ್ತಿದೆ. ಈ ಗೆಲುವಿನ ಬೆನ್ನಲ್ಲೇ ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಇನ್ನೊಂದೆಡೆ, ದೀಪಿಕಾ ಪಡುಕೋಣೆ ಕೂಡ ಸಾಲು ಸಾಲು ದೊಡ್ಡ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಜೊತೆ ಸಿದ್ದಾರ್ಥ್ ಆನಂದ್ ಮಾಡುತ್ತಿರುವ ‘ಕಿಂಗ್’ ಸಿನಿಮಾದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದಲ್ಲೂ ದೀಪಿಕಾ ನಟಿಸುತ್ತಿದ್ದಾರೆ.
ಇದನ್ನೂ ಓದಿ: ‘ರಾಕಾ’ ಸಿನಿಮಾ: ದೀಪಿಕಾ ಪಡುಕೋಣೆಗೆ ಹೀರೋಗೆ ಸರಿಸಮಾನವಾಗಿ ಸಂಭಾವನೆ ಸಿಕ್ಕಿತೇ?
ದೀಪಿಕಾ ಪಡುಕೋಣೆ ಅವರಿಗೆ ಸಖತ್ ಬೇಡಿಕೆ ಇದೆ. ಆದರೆ ಅವರು ಎಲ್ಲ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. 8 ಗಂಟೆ ಮಾತ್ರ ಕೆಲಸದ ಅವಧಿ ಇರಬೇಕು ಎಂದು ಅವರು ಷರತ್ತು ಹಾಕುತ್ತಿದ್ದಾರೆ. ಅದರಿಂದಾಗಿ ಕೆಲವು ಸಿನಿಮಾಗಳು ಅವರ ಕೈತಪ್ಪುತ್ತಿವೆ. ಈಗ ಪ್ರಗ್ನೆಂಟ್ ಕೂಡ ಆಗಿರುವುದರಿಂದ ಸಹಜವಾಗಿಯೇ ಅವರು ಬ್ರೇಕ್ ತೆಗೆದುಕೊಳ್ಳಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
