ನವದೆಹಲಿ, ಜೂನ್ 20: ಹೆತ್ತ ಮಕ್ಕಳನ್ನು ಹಣಕ್ಕೆ ಬೇರೆಯವರಿಗೆ ಮಾರಾಟ ಮಾಡಲು ಯಾರಿಗಾದರೂ ಮನಸು ಬರುತ್ತದೆಯೇ? ಆದರೆ, ದುಡ್ಡಿನ ಆಸೆಗೆ ಇಂತಹ ನೀಚ ಕೃತ್ಯಕ್ಕೆ ದೆಹಲಿಯ (Delhi) ಸುತ್ತಮುತ್ತಲಿನ ಅನೇಕ ರಾಜ್ಯಗಳ ಪೋಷಕರು ಮುಂದಾಗಿದ್ದಾರೆ. ದೆಹಲಿಯಲ್ಲಿ ‘ಬೇಬಿ ಬಜಾರ್’ ಸೃಷ್ಟಿಯಾಗಿದ್ದು, ಇಲ್ಲಿ ಗಂಡು ಮಗುವಿಗೆ 8 ಲಕ್ಷ ರೂ.ವರೆಗೂ ನೀಡಿ ಖರೀದಿಸಲಾಗುತ್ತಿದೆ. ಅದರ ಅರ್ಧ ಬೆಲೆಗೆ ಹೆಣ್ಣು ಮಗುವನ್ನು ಮಾರಾಟ ಮಾಡಲಾಗುತ್ತಿದೆ.
ಪೊಲೀಸ್ ತನಿಖೆಯ ಪ್ರಕಾರ, ಈ ಕರಾಳ ದಂಧೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ದರ ನಿಗದಿಪಡಿಸಲಾಗಿತ್ತು. ಬಡ ಪೋಷಕರಿಂದ ಸುಮಾರು 1 ಲಕ್ಷ ರೂ.ಗೆ ಹೆಣ್ಣು ಮಗುವನ್ನು ಪಡೆದು, ಮಕ್ಕಳಿಲ್ಲದ ದಂಪತಿಗಳಿಗೆ 3ರಿಂದ 4 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಸುಮಾರು 2 ಲಕ್ಷ ರೂ.ಗೆ ಗಂಡು ಮಗುವನ್ನು ಖರೀದಿಸಿ, 6ರಿಂದ 8 ಲಕ್ಷ ರೂಪಾಯಿವರೆಗಿನ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿತ್ತು.
ದೆಹಲಿಯ ಪಹಾರ್‌ಗಂಜ್ ನಿವಾಸಿಯೊಬ್ಬರು ನೀಡಿದ ಸುಳಿವು ಈ ಯಶಸ್ವಿ ಕಾರ್ಯಾಚರಣೆಗೆ ಕಾರಣವಾಯಿತು. ಜ್ಯೋತಿ ಎಂಬ ಮಹಿಳೆ ಪ್ರತಿ ಬಾರಿ ಬೇರೆ ಬೇರೆ ಹಸುಗೂಸುಗಳೊಂದಿಗೆ ಆ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತನಿಖೆ ನಡೆಸಿದಾಗ ಈಕೆ ಹಸುಗೂಸುಗಳ ಮಾರಾಟ ದಂಧೆಯಲ್ಲಿ ತೊಡಗಿರುವುದು ಖಚಿತವಾಯಿತು.
ಹೀಗಾಗಿ, ಈ ದಂಧೆಯನ್ನು ಬಯಲು ಮಾಡಬೇಕೆಂದು ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಮಗು ಬೇಕೆಂದು ನಕಲಿ ಗ್ರಾಹಕಿಯಾಗಿ ಜ್ಯೋತಿಯನ್ನು ಸಂಪರ್ಕಿಸಿದರು. 20,000 ರೂ. ಮುಂಗಡ ಹಣ ನೀಡಿ ಮಗುವನ್ನು ಪಡೆಯುವಾಗ, ಜೂನ್ 5ರಂದು ಆಕೆಯನ್ನು ಸ್ಥಳದಲ್ಲೇ ಬಂಧಿಸಲಾಯಿತು. ಆಕೆಯನ್ನು ವಿಚಾರಣೆ ನಡೆಸಿದಾಗ ಈ ಶಿಶು ಮಾರಾಟ ಜಾಲದ ಬಗ್ಗೆ ಎಲ್ಲವೂ ಬಯಲಾಯಿತು.
ಇದರ ಬೆನ್ನಲ್ಲೇ ಆಕೆಯ ಸಹಚರರಾದ ಶಾಲು, ಲಲಿತ್, ಪ್ರತಿಭಾ ಮತ್ತು ವಿಪಿನ್ ಎಂಬುವವರನ್ನು ಪೊಲೀಸರು ಬಂಧಿಸಿದರು. ಪ್ರತಿಭಾ ಮತ್ತು ವಿಪಿನ್ ಬಂಧನಕ್ಕೊಳಗಾದಾಗ ಅವರ ಬಳಿ 3 ಲಕ್ಷ ರೂಪಾಯಿ ಪತ್ತೆಯಾಯಿತು. ಸತತ ತನಿಖೆಯ ನಂತರ ಪೊಲೀಸರು ಒಂದು ತಿಂಗಳೊಳಗಿನ 5 ಹಸುಗೂಸುಗಳನ್ನು ರಕ್ಷಿಸಿದರು. ಆರೋಪಿಗಳ ವಿಚಾರಣೆಯಿಂದ ರೋಹಿಣಿಯ ಬೇಗಂಪುರದಲ್ಲಿರುವ ‘ಹೀರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ಈ ದಂಧೆಯ ಪ್ರಮುಖ ಕೇಂದ್ರ ಮತ್ತು ಅದರ ಮಾಲೀಕ ಡಾ. ವಿವೇಕಿ ಇದರ ಸೂತ್ರಧಾರಿ ಎಂಬುದು ತಿಳಿದುಬಂದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ದೆಹಲಿಯ ಡಿಸಿಪಿ ರೋಹಿತ್ ರಾಜ್‌ಬೀರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, “ಖರೀದಿಸಿದ ಮಕ್ಕಳನ್ನು ದಂಪತಿಗಳಿಗೆ ತಲುಪಿಸುವವರೆಗೆ ಇದೇ ಆಸ್ಪತ್ರೆಯಲ್ಲಿ ಇಡಲಾಗುತ್ತಿತ್ತು. ಡಾ. ವಿವೇಕಿ ಮಕ್ಕಳ ನಕಲಿ ಜನನ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಸೃಷ್ಟಿಸಿ, ಮಗು ಆಸ್ಪತ್ರೆಯಲ್ಲೇ ಜನಿಸಿದೆ ಎಂದು ಬಿಂಬಿಸುತ್ತಿದ್ದರು. ಅವರೇ ಈ ದಂಧೆಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು” ಎಂದಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರ ಜಾಲ ಪತ್ತೆ; 7 ಮಂದಿ ಬಂಧನ
ಈ ಪ್ರಕರಣದಲ್ಲಿ ಗುಜರಾತ್‌ನ ಸಬರಕಾಂಠಾದಲ್ಲಿ ಸಬಾಭಾಯ್ ಗಮಾರ್ ಅಲಿಯಾಸ್ ಕಾಲಿಯಾ ಎಂಬಾತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈತ ರಾಜಸ್ಥಾನದ ಪಾಲಿ ಮತ್ತು ಗುಜರಾತ್‌ನ ಬಡ ಕುಟುಂಬಗಳಿಂದ ಮಕ್ಕಳನ್ನು ತಂದು ದೆಹಲಿಯ ಆಸ್ಪತ್ರೆಗೆ ತಲುಪಿಸುತ್ತಿದ್ದ. ಈ ಗ್ಯಾಂಗ್ ಕಳೆದ 1 ವರ್ಷದಲ್ಲಿ ಕನಿಷ್ಠ 30 ಮಕ್ಕಳನ್ನು ಮಾರಾಟ ಮಾಡಿದೆ. ಹರಿಯಾಣದ ಪಾಣಿಪತ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಕ್ಕಳನ್ನು ಖರೀದಿಸಿದ್ದ ದಂಪತಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳನ್ನು ಮಾರಿದ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎನ್ಡಿಟಿವಿ ವರದಿಯಲ್ಲಿ ತಿಳಿಸಿದೆ.
ಈ ಕಾರ್ಯಾಚರಣೆಯಲ್ಲಿ ರಕ್ಷಿಸಲಾದ 5 ಹಸುಗೂಸುಗಳನ್ನು ಮಕ್ಕಳ ಕಲ್ಯಾಣ ಸಮಿತಿಯ (CWC) ಪಾಲನಾ ಕೇಂದ್ರದಲ್ಲಿ ಸುರಕ್ಷಿತವಾಗಿಡಲಾಗಿದ್ದು, ಕಾನೂನುಬದ್ಧ ದತ್ತು ಪ್ರಕ್ರಿಯೆ ಅಥವಾ ಮಕ್ಕಳ ಹೋಮ್‌ಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
