ನವದೆಹಲಿ, ಫೆಬ್ರವರಿ 20: ವೈಯಕ್ತಿಕ ಸಮಸ್ಯೆಗಳಿಂದ ಬೇಸತ್ತು ಬಾಲಕನೊಬ್ಬ ದೆಹಲಿ ಮೆಟ್ರೋ(Delhi Metro) ಎದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆ ಪಶ್ಚಿಮ ದೆಹಲಿಯ ಉತ್ತಮ್ ನಗರ ಪೂರ್ವ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಳಗ್ಗೆ 11.7ಕ್ಕೆ ನಿಲ್ದಾಣ ನಿಯಂತ್ರಕರಿಂದ ವ್ಯಕ್ತಿಯೊಬ್ಬ ಹಳಿಗಳ ಮೇಲೆ ಹಾರಿದ ಬಗ್ಗೆ ಮಾಹಿತಿ ಬಂದಿತ್ತು. ದ್ವಾರಕಾ ಕಡೆಯಿಂದ ಬರುತ್ತಿದ್ದ ಮೆಟ್ರೋ ರೈಲು ಆತನ ಮೇಲೆ ಹರಿದಿದೆ. ಪೊಲೀಸರು ಬರುವ ಮೊದಲೇ ಮೃತದೇಹವನ್ನು ಹಳಿಗಳಿಂದ ತೆಗೆಯಲಾಗಿತ್ತು.
ಮೃತ ವ್ಯಕ್ತಿಯನ್ನು ನಜಾಫ್‌ಗಢ ನಿವಾಸಿ ಎಂದು ಗುರುತಿಸಲಾಗಿದೆ. ಆತ 12ನೇ ತರಗತಿ ಪೂರ್ಣಗೊಳಿಸಿದ್ದು, ಉತ್ತಮ್ ನಗರದ ಖಾಸಗಿ ಸಂಸ್ಥೆಯಲ್ಲಿ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಾ ಹೆಚ್ಚಿನ ಅಧ್ಯಯನಕ್ಕೆ ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ನೀಲಿ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಸಹ ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿದ್ದವು.
ಪ್ರಾಥಮಿಕ ತನಿಖೆಯಲ್ಲಿ ಆತ ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಆತನ ತಂದೆ ಡಿಟಿಸಿಯಲ್ಲಿ ಗುತ್ತಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ, ಪೋಷಕರಿಗೆ ಆತನೊಬ್ಬನೇ ಆ ಎಂದು ಡಿಸಿಪಿ ಮೆಟ್ರೋ ಕುಶಾಲ್ ಪಾಲ್ ಸಿಂಗ್ ಹೇಳಿದ್ದಾರೆ.
ಮತ್ತಷ್ಟು ಓದಿ: Viral Video: ಛೀ.. ಥೂ.. ದೆಹಲಿ ಮೆಟ್ರೋ ಪ್ಲಾಟ್ಫಾರ್ಮ್ನಲ್ಲಿ ಮೂತ್ರ ವಿಸರ್ಜಿಸಿ ಸಿಕ್ಕಿಬಿದ್ದ ವ್ಯಕ್ತಿ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಸೆಕ್ಷನ್ 194 ರ ಅಡಿಯಲ್ಲಿ ತನಿಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2025ರ ನವೆಂಬರ್ 24ರಂದು ರೋಹಿಣಿ ವೆಸ್ಟ್ ಮೆಟ್ರೋ ನಿಲ್ದಾಣಕ್ಕೆ ಬರುತ್ತಿದ್ದ ರೈಲಿನ ಮುಂದೆ ಹಾರಿ 37 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.ಮೃತ ವ್ಯಕ್ತಿಯನ್ನು ರೋಹಿಣಿ ಸೆಕ್ಟರ್ 2 ರ ನಿವಾಸಿ ಹೇಮಂತ್ ನೇಗಿ ಎಂದು ಗುರುತಿಸಲಾಗಿತ್ತು. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ರೋಹಿಣಿ ವೆಸ್ಟ್ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 3 ರ ಬಳಿ ಪ್ರಯಾಣಿಕರೊಬ್ಬರು ರೈಲಿನ ಮುಂದೆ ಹಾರಿದ್ದಾರೆ ಎಂದು ಸಂಜೆ 5.03 ರ ಸುಮಾರಿಗೆ ಪಿಸಿಆರ್ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ ಗಾಯಾಳುಗಳನ್ನು ಈಗಾಗಲೇ ಆಂಬ್ಯುಲೆನ್ಸ್‌ನಲ್ಲಿ ಬಿಎಸ್‌ಎ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅವರು ಗಾಜಿಯಾಬಾದ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
