Headlines

ದೇವರು ವರ-ಶಾಪ ನೀಡಲ್ಲ, ಅವಕಾಶ ಕೊಡ್ತಾನೆ: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಭಾವುಕ ಪೋಸ್ಟ್

ಡಿಕೆ ಶಿವಕುಮಾರ್ & ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮೇ 29: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕ ಮತ್ತು ಗೌರವಪೂರ್ವಕ ಸಂದೇಶ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಐದು ದಶಕಗಳ ರಾಜಕೀಯ ಸೌಹಾರ್ದತೆ, ಹೋರಾಟದ ಹಾದಿ ಮತ್ತು ಜನಪರ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಡಿಕೆ ಶಿವಕುಮಾರ್, ‘ವೇಗವಾಗಿ ನಡೆಯಬೇಕೆಂದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕೆಂದರೆ ಜೊತೆಯಾಗಿ ನಡೆಯಬೇಕು’ ಎಂಬ ಗಾದೆಯೊಂದಿಗೆ ಕರುನಾಡಿನ ಪ್ರಗತಿಗಾಗಿ ಸಿದ್ದರಾಮಯ್ಯ ಜತೆ ಒಟ್ಟಾಗಿ ಸಾಗುವ ಬಗ್ಗೆ ಪುನರುಚ್ಚರಿಸಿದ್ದಾರೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜಕೀಯ ಯಾನ ಯುವ ಪೀಳಿಗೆಗೆ ಮಾದರಿ ಎಂದು ಬಣ್ಣಿಸಿದ ಡಿಕೆಶಿ.
  • 2020ರಲ್ಲಿ ತಾವು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ತಮಗೆ ಭದ್ರವಾದ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಕೃತಜ್ಞತೆ ಸಲ್ಲಿಕೆ.
  • ಸಿದ್ದರಾಮಯ್ಯ ಹಿರಿಯ ಅನುಭವ ಮತ್ತು ಮಾರ್ಗದರ್ಶನ ಅತ್ಯಗತ್ಯ ಎಂದ ಡಿಸಿಎಂ

ಡಿಕೆ ಶಿವಕುಮಾರ್ ಎಕ್ಸ್ ಸಂದೇಶದಲ್ಲೇನಿದೆ?

‘ದೇವರು ವರ ಅಥವಾ ಶಾಪ ನೀಡುವುದಿಲ್ಲ, ಆತ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಆ ಸಿಕ್ಕ ಅವಕಾಶದಲ್ಲಿ ನಾವು ಏನನ್ನು ಸಾಧಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಆಲೋಚನೆಗೆ ನಮ್ಮ ಸಿದ್ದರಾಮಯ್ಯ ಅವರ ಜೀವನವೇ ಅತ್ಯುತ್ತಮ ಉದಾಹರಣೆ. ಮೈಸೂರು ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ-ಬೆಳೆದು, ಸತತ ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ ಹಾಗೂ ಬಡವರ ಬಂಧುವಾಗಿ ಕರ್ನಾಟಕದ ಮುಖ್ಯಮಂತ್ರಿಯಾದವರು ನನ್ನ ಆತ್ಮೀಯ ಶ್ರೇಯೋಭಿಲಾಷಿ ಸಿದ್ದರಾಮಯ್ಯನವರು’ ಎಂದು ಡಿಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ

‘ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಮತ್ತು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅವರು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಜನಕೇಂದ್ರಿತ ಯೋಜನೆಗಳು ಮತ್ತು ರಾಜ್ಯದ ವಿವಿಧ ವಲಯಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಎಂದಿಗೂ ಮರೆಯಲಾಗದವು. ಸುಮಾರು 50 ವರ್ಷಗಳ ಅವರ ಸುದೀರ್ಘ ರಾಜಕೀಯ ಅನುಭವ ಮತ್ತು ಸಾಮಾಜಿಕ ಕಾಳಜಿ ಸದಾ ಸ್ಮರಣೀಯ. 2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ಸಿದ್ದರಾಮಯ್ಯ ಅವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಸಂಘಟನೆಯಲ್ಲಿ ಭದ್ರ ಸ್ತಂಭದಂತೆ ಜೊತೆಯಾಗಿ ನಿಂತಿದ್ದಾರೆ’ ಎಂದು ಡಿಕೆಶಿ ಬರೆದಿದ್ದಾರೆ.

‘ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಚಿವನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಅವರ ಅನುಭವ, ಬುದ್ಧಿವಂತಿಕೆ ಮತ್ತು ರಾಜಕೀಯ ದೂರದೃಷ್ಟಿಯಿಂದ ನಿರಂತರವಾಗಿ ಕಲಿಯುವ ಸೌಭಾಗ್ಯ ನನ್ನದಾಗಿತ್ತು. ಮುಂಬರುವ ದಿನಗಳಲ್ಲೂ ರಾಜ್ಯದ ಕಲ್ಯಾಣಕ್ಕಾಗಿ ಮತ್ತು ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಅವರ ಹಿರಿಯ ಅನುಭವದ ಮಾರ್ಗದರ್ಶನ ಮತ್ತು ಬೆಂಬಲ ನಮಗೆ ಹೀಗೆಯೇ ಮುಂದುವರಿಯುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ. ವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು ಎಂಬ ನಾಣ್ಣುಡಿಯಂತೆ, ಕರ್ನಾಟಕದ ಜನರ ಸೇವೆಗಾಗಿ ಮತ್ತು ರಾಜ್ಯದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ಡಿಕೆ ಶಿವಕುಮಾರ್ ತಮ್ಮ ಎಕ್ಸ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *