ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal) ದ ರಾಜಕೀಯ ಅಖಾಡದಲ್ಲಿ ಸಂಚಲನ ಮೂಡಿಸಿರುವ ಉತ್ತರ 24 ಪರಗಣ ಜಿಲ್ಲೆಯ ಶೂಟೌಟ್ ಪ್ರಕರಣದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಅತ್ಯಂತ ಆಪ್ತ ಚಂದ್ರನಾಥ್ ರಥ್ (41) ಬಲಿಯಾಗಿದ್ದಾರೆ. ಭಾರತೀಯ ವಾಯುಪಡೆಯ ನಿವೃತ್ತ ಯೋಧನೊಬ್ಬ ರಾಜಕೀಯ ವ್ಯೂಹರಚನಾಕಾರನಾಗಿ ಬೆಳೆದ ಹಾದಿ ಗುಂಡಿನ ದಾಳಿಯೊಂದಿಗೆ ರಕ್ತಸಿಕ್ತವಾಗಿ ಕೊನೆಗೊಂಡಿದೆ.
ಬುಧವಾರ ರಾತ್ರಿ ಮಧ್ಯಮಗ್ರಾಮದ ದೊಹಾರಿಯಾ ಪ್ರದೇಶದ ಬಳಿ ಚಂದ್ರನಾಥ್ ರಥ್ ಅವರು ಸಂಚರಿಸುತ್ತಿದ್ದ ವಾಹನವನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಅತ್ಯಂತ ಹತ್ತಿರದಿಂದ ಗುಂಡು ಹಾರಿಸಿದ ಪರಿಣಾಮ ರಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಹತ್ಯೆಯು ಬಂಗಾಳದ ಚುನಾವಣಾ ನಂತರದ ಅಸ್ಥಿರ ವಾತಾವರಣವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಚಂದ್ರನಾಥ ಮೂಲತಃ ಪುರ್ಬಾ ಮೇದಿನಿಪುರದ ಚಾಂಡಿಪುರದವರಾದವರು, ರಹರಾ ರಾಮಕೃಷ್ಣ ಮಿಷನ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಇವರು, ರಾಮಕೃಷ್ಣ ಮಿಷನ್‌ನ ಆಧ್ಯಾತ್ಮಿಕ ನೀತಿಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು. ಒಂದು ಹಂತದಲ್ಲಿ ಆಧ್ಯಾತ್ಮಿಕ ಜೀವನವನ್ನೂ ಪರಿಗಣಿಸಿದ್ದರು.
ಸುಮಾರು ಎರಡು ದಶಕಗಳ ಕಾಲ ಭಾರತೀಯ ವಾಯುಪಡೆ (IAF) ಯಲ್ಲಿ ಸೇವೆ ಸಲ್ಲಿಸಿ ದೇಶದ ರಕ್ಷಣೆಯಲ್ಲಿ ತೊಡಗಿದ್ದರು.
ಮತ್ತಷ್ಟು ಓದಿ: ಬಂಗಾಳದಲ್ಲಿ ಕೇಸರಿ ಯುಗಾರಂಭ: ಮೇ 9 ರಂದು ಬಿಜೆಪಿ ಸರ್ಕಾರದ ಪಟ್ಟಾಭಿಷೇಕ, ಸಿಎಂ ರೇಸ್‌ನಲ್ಲಿ ಸುವೇಂದು ಅಧಿಕಾರಿ ಮುಂಚೂಣಿ
ವಾಯುಪಡೆಯಿಂದ ಸ್ವಯಂಪ್ರೇರಿತ ನಿವೃತ್ತಿ ಪಡೆದ ನಂತರ, ಕಾರ್ಪೊರೇಟ್ ವಲಯದಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದರು. 2019 ರಲ್ಲಿ ಸುವೇಂದು ಅಧಿಕಾರಿ ಅವರು ಸಚಿವರಾಗಿದ್ದಾಗ ಅವರ ಅಧಿಕೃತ ತಂಡವನ್ನು ಸೇರುವ ಮೂಲಕ ರಾಜಕೀಯ ಸಮನ್ವಯದ ಜವಾಬ್ದಾರಿ ವಹಿಸಿಕೊಂಡರು. ರಥ್ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಸುವೇಂದು ಅಧಿಕಾರಿಯವರ ರಾಜಕೀಯ ಕಾರ್ಯಾಚರಣೆಗಳ ‘ಮಾಸ್ಟರ್ ಮೈಂಡ್’ ಆಗಿದ್ದರು.
ಸಾಂಸ್ಥಿಕ ಕೆಲಸಗಳ ಸಮನ್ವಯ ಮತ್ತು ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿ ಅವರು ಸಿದ್ಧಹಸ್ತರು. ಬಿಜೆಪಿಯ ಹೈ-ವೋಲ್ಟೇಜ್ ಕದನವಾದ ಭಬಾನಿಪುರ ಪ್ರಚಾರ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಧಿಕಾರಿಯವರು ತೃಣಮೂಲ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದಾಗಲೂ, ರಥ್ ಅವರ ಕುಟುಂಬವು (ತಾಯಿ ಹಸಿ ರಥ್ ಸೇರಿದಂತೆ) ನಿಷ್ಠೆಯನ್ನು ಬದಲಿಸಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿತ್ತು.
ಮೃದುಭಾಷಿ ಮತ್ತು ಸರಳ ವ್ಯಕ್ತಿತ್ವದ ರಥ್ ಅವರನ್ನು ಕಳೆದುಕೊಂಡಿರುವುದು ಬಿಜೆಪಿ ಸಂಘಟನೆಗೆ ದೊಡ್ಡ ಹೊಡೆತ ನೀಡಿದೆ. ಭವಿಷ್ಯದಲ್ಲಿ ಅವರಿಗೆ ದೊಡ್ಡ ಆಡಳಿತಾತ್ಮಕ ಜವಾಬ್ದಾರಿ ನೀಡುವ ಊಹಾಪೋಹಗಳು ಪಕ್ಷದ ವಲಯದಲ್ಲಿದ್ದವು. ಆದರೆ, ಈ ಹತ್ಯೆಯು ಬಂಗಾಳದ ಕಾನೂನು ಸುವ್ಯವಸ್ಥೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.
ಬಿಜೆಪಿ ಈ ಹತ್ಯೆಯನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿದ್ದರೆ, ಇಡೀ ರಾಜ್ಯದಲ್ಲಿ ಈ ಘಟನೆ ತೀವ್ರ ಪ್ರತಿರೋಧಕ್ಕೆ ಕಾರಣವಾಗಿದೆ. ಪೊಲೀಸರು ಸದ್ಯ ಪ್ರಕರಣದ ತನಿಖೆ ನಡೆಸುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
