ನಟ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ ಹಿಟ್ ಆಯ್ತು. ಆದರೆ ಎರಡೂ ಸಿನಿಮಾಗಳ ಬಹುತೇಕ ಕ್ರೆಡಿಟ್ ಹೋಗಿದ್ದು ನಿರ್ದೇಶಕ ಆದಿತ್ಯ ಧರ್ಗೆ. ‘ಧುರಂಧರ್’ ಬಳಿಕ ದೊಡ್ಡ ಸಿನಿಮಾನಲ್ಲಿ ರಣ್ವೀರ್ ನಟಿಸಲಿದ್ದಾರೆ ಎಂದುಕೊಳ್ಳುತ್ತಿದ್ದಂತೆ ಅವರನ್ನು ಬಾಲಿವುಡ್ನಿಂದಲೇ ಬ್ಯಾನ್ ಮಾಡಲಾಗಿದೆ. ಆದರೆ ಈ ಬ್ಯಾನ್ ಘೋಷಣೆ ಆಗುತ್ತಿದ್ದಂತೆ ನಟ ರಣ್ವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಓಡಿ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ದೈವಕ್ಕೆ ಅಪಮಾನ ಎಸಗಿದ್ದ ರಣ್ವೀರ್ ಸಿಂಗ್ ಅವರಿಗೆ ಮಾಡಿದ ತಪ್ಪಿಗೆ ಕ್ಷಮೆ ಕೇಳುವಂತೆ ಹೈಕೋರ್ಟ್ ಸೂಚಿಸಿತ್ತು. ಈಗ ಜೀವನದಲ್ಲಿ ದೊಡ್ಡ ಹಿನ್ನಡೆ ಆಗುತ್ತಿದ್ದಂತೆ ಚಾಮುಂಡಿ ತಾಯಿಯ ಬಳಿ ಕ್ಷಮೆ ಕೇಳಲು ಬಂದಿದ್ದಾರೆ ರಣ್ವೀರ್ ಸಿಂಗ್.
ಕೆಲ ತಿಂಗಳ ಹಿಂದೆ ಗೋವಾನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ವದಲ್ಲಿ ವಿಶೇಷ ಅತಿಥಿಯಾಗಿ ರಣ್ವೀರ್ ಸಿಂಗ್ ಭಾಗವಹಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಸಹ ವೇದಿಕೆಯ ಮುಂದೆ ಇದ್ದರು. ಈ ವೇಳೆ ರಿಷಬ್ ಅವರನ್ನು ಮಾತನಾಡಿಸುವ ಸಂದರ್ಭದಲ್ಲಿ ಅತಿಯಾಗಿ ಆಡಿದ ರಣ್ವೀರ್ ಸಿಂಗ್ ತೀರ ಕೆಟ್ಟದಾಗಿ, ಅಸಹ್ಯಕರ ರೀತಿಯಲ್ಲಿ ದೈವವನ್ನು ಅನುಕರಣೆ ಮಾಡಿದ್ದರು. ರಿಷಬ್ ಶೆಟ್ಟಿ ಬೇಡವೆಂದರೂ ಸಹ ಅನುಕರಣೆ ನಿಲ್ಲಿಸಲಿಲ್ಲ ರಣ್ವೀರ್ ಸಿಂಗ್.
ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯ್ತು. ಮರು ದಿನವೇ ರಣ್ವೀರ್ ಸಿಂಗ್ ಕ್ಷಮೆ ಕೇಳಿದರಾದರೂ, ಈ ಬಗ್ಗೆ ಹೈಕೋರ್ಟ್ನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ರಣ್ವೀರ್ ಸಿಂಗ್ ಮಾಡಿರುವುದು ತಪ್ಪೆಂದು ತೀರ್ಮಾನಿಸಿ, ಚಾಮುಂಡಿ ದೇವಾಲಯದಲ್ಲಿ ರಣ್ವೀರ್ ಸಿಂಗ್ ಕ್ಷಮೆ ಕೇಳಬೇಕು ಎಂದು ಕೆಲ ವಾರಗಳ ಹಿಂದೆ ಸೂಚನೆ ನೀಡಿತ್ತು. ಆದರೆ ರಣ್ವೀರ್ ಸಿಂಗ್ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ ಇದೀಗ ತಮ್ಮ ಜೀವನದಲ್ಲಿ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಿದ್ದಂತೆ ಇಂದು (ಮೇ 26) ಚಾಮುಂಡಿ ಬೆಟ್ಟಕ್ಕೆ ಆಗಮಿಸಿರುವ ನಟ ರಣ್ವೀರ್ ಸಿಂಗ್ ಚಾಮುಂಡಿ ದೇವಾಲಯದ ಗರ್ಭಗುಡಿಯಲ್ಲಿ ಕೂತು ತಾಯಿಯ ಮುಂಚೆ ಕ್ಷಮೆ ಯಾಚನೆ ಮಾಡಿದ್ದಾರೆ. ಅಲ್ಲದೆ, ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದಾರೆ. ಕೆಲ ಹರಕೆಗಳನ್ನು ಸಹ ರಣ್ವೀರ್ ಸಿಂಗ್ ಹೊತ್ತಿದ್ದಾರೆ ಎನ್ನಲಾಗುತ್ತಿದೆ. ರಣ್ವೀರ್ ಸಿಂಗ್ ಚಾಮುಂಡಿ ದೇವಾಲಯದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿರುವ ಚಿತ್ರ ಮತ್ತು ವಿಡಿಯೋ ಇದೀಗ ವೈರಲ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ