ಗಿಡಮೂಲಿಕೆಗಳ ರಾಣಿ ಎಂದೇ ಕರೆಯಲ್ಪಡುವ ತುಳಸಿ (Tulsi) ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಸಸ್ಯಕ್ಕೆ ಪೂಜ್ಯನೀಯ ಸ್ಥಾನವನ್ನು ನೀಡಲಾಗಿರುವುದರಿಂದ ಮನೆಗಳಲ್ಲಿ ಈ ಪವಿತ್ರ ಗಿಡವನ್ನು ನೆಟ್ಟು ಪೂಜಿಸಲಾಗುತ್ತದೆ. ಧಾರ್ಮಿಕ ಮಹತ್ವವನ್ನು ಪಡೆದಿರುವ ತುಳಸಿ ಹಲವಾರು ಔಷಧೀಯ ಗುಣಗಳನ್ನು ಸಹ ಹೊಂದಿದೆ. ತುಳಸಿ ಎಲೆಯಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಕ್ಯಾಲ್ಸಿಯಂ, ಮೆಗ್ನೇಸಿಯಂ, ರಂಜಕ, ಕಬ್ಬಿಣದಂತಹ ಹಲವಾರು ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳಿದ್ದು, ಪ್ರತಿನಿತ್ಯ ತುಳಸಿ ಎಲೆಯನ್ನು ಸೇವನೆ ಮಾಡುವುದರಿಂದ ಸಾಕಷ್ಟು ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಿದ್ದರೆ ತುಳಸಿ ಎಲೆಯ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಅನ್ನೋದನ್ನು ನೋಡೋಣ ಬನ್ನಿ.
ತುಳಸಿ ಎಲೆಯ ಸೇವನೆಯಿಂದ ಲಭಿಸುವ ಪ್ರಯೋಜನಗಳೇನು?
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ತುಳಸಿ ಎಲೆಗಳು ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ದೇಹವನ್ನು ಒಳಗಿನಿಂದ ಶುದ್ಧೀಕರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ. ಇದರ ಜೊತೆಗೆ, ಇದು ಶೀತ, ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಒತ್ತಡವನ್ನು ನಿವಾರಿಸುತ್ತದೆ: ತುಳಸಿ ಎಲೆಗಳು ಅಡಾಪ್ಟೋಜೆನಿಕ್ ಗುಣಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಒತ್ತಡದ ಹಾರ್ಮೋನ್ ‘ಕಾರ್ಟಿಸೋಲ್’ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ, ಮನಸ್ಸಿನ ಶಾಂತಿಯನ್ನು ಹೆಚ್ಚಿಸುತ್ತವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಅಗಿಯುವುದರಿಂದ ದೇಹದಲ್ಲಿನ ಒತ್ತಡದ ಮಟ್ಟ ಕಡಿಮೆಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ. ಇದಲ್ಲದೆ ತುಳಸಿ ಚಹಾವನ್ನು ಕೂಡ ಸೇವಿಸಬಹುದು. ತುಳಸಿಯು ಆತಂಕ, ಚಿಂತೆ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ರಕ್ಷಿಸುತ್ತದೆ ,ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ತುಳಸಿ ಎಲೆಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಎಲೆಗಳು ನೈಸರ್ಗಿಕ ಉರಿಯೂತ ನಿವಾರಕ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳನ್ನು ಹೊಂದಿವೆ, ಇದು ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸಾಮಾನ್ಯವಾಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಹೊಟ್ಟೆ ತಂಪಾಗುತ್ತದೆ. ತುಳಸಿ ಎಲೆಯ ನಿಯಮಿತ ಸೇವನೆಯು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ತುಳಸಿ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ. ಈ ಎಲೆಗಳು ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ತುಳಸಿ ಎಲೆಗಳು ಹೃದಯಕ್ಕೂ ತುಂಬಾ ಪ್ರಯೋಜನಕಾರಿ. ತುಳಸಿ ಎಲೆಗಳು ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್ರೂಮ್ನಲ್ಲಿ ಈ ಗಿಡಗಳನ್ನಿಡಿ
ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ: ತುಳಸಿ ಗಿಡ ಇರುವ ಸ್ಥಳವು ಶಾಂತಿ ಮತ್ತು ಸಕಾರಾತ್ಮಕ ಕಂಪನಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ತುಳಸಿ ಗಿಡದ ಬಳಿ ದೀಪ ಹಚ್ಚುವುದರಿಂದ ಮನಸ್ಸಿಗೆ ಒಂದು ರೀತಿಯ ಶಾಂತಿ ಲಭಿಸುತ್ತದೆ, ಸಕಾರಾತ್ಮಕ ಶಕ್ತಿಯೂ ಹೆಚ್ಚುತ್ತದೆ.
ಗಾಳಿಯನ್ನು ಶುದ್ಧೀಕರಿಸುತ್ತದೆ: ತುಳಸಿ ದಿನದ 24 ಗಂಟೆಗಳ ಕಾಲ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ, ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲ್ಲದೆ ಈ ಗಿಡದ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.
ತುಳಸಿ ಎಲೆಗಳನ್ನು ಯಾವಾಗ ತಿನ್ನಬೇಕು?
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ.
- ನೀವು ತುಳಸಿ ಎಲೆಯ ಚಹಾ ಅಥವಾ ರಸವನ್ನು ಸಹ ಕುಡಿಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
