ದೊಡ್ಡ ಹಾಲಿವುಡ್​​ ಸಿನಿಮಾ ಅವಕಾಶ ಕಳೆದುಕೊಂಡ ಫಹಾದ್ ಫಾಸಿಲ್ – Kannada News | Fahad Fazil got chance to act with Tom Cruise in Digger movie

ಭಾರತದ ಕೆಲವಾರು ನಟ-ನಟಿಯರು ಈಗಾಗಲೇ ಹಾಲಿವುಡ್ (Hollywood) ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಹಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆಯ ದೊಡ್ಡ ಸಿನಿಮಾಗಳಲ್ಲಿ ನಟಿಸಿರುವುದು ಬೆರಳೆಣಿಕೆಯ ನಟರಷ್ಟೆ. ಇರ್ಫಾನ್ ಖಾನ್, ನಸಿರುದ್ದೀನ್ ಶಾ, ದೀಪಿಕಾ ಪಡುಕೋಣೆ ಇನ್ನೂ ಕೆಲವರಷ್ಟೆ ಹಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆಗಳು, ಹೆಸರಾಂತ ನಟರುಗಳು ಹಾಗೂ ಖ್ಯಾತ ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡಿದ್ದಾರೆ. ಇಂಥಹದ್ದೇ ಒಂದು ದೊಡ್ಡ ಹಾಲಿವುಡ್ ಸಿನಿಮಾನಲ್ಲಿ ನಟಿಸುವ ಅವಕಾಶ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಅವರಿಗೆ ದೊರಕಿತ್ತು, ಆದರೆ ಅವರೇ ಖುದ್ದು ಅದನ್ನು ಕೈಚೆಲ್ಲಿದ್ದಾರೆ.

ಟಾಮ್ ಕ್ರೂಸ್, ವಿಶ್ವ ಚಿತ್ರರಂಗದ ಟಾಪ್ ಸೂಪರ್ ಸ್ಟಾರ್. ಅವರ ಹೊಸ ಸಿನಿಮಾನಲ್ಲಿ ನಟಿಸುವ ಅವಕಾಶ ಫಹಾದ್ ಫಾಸಿಲ್ ಅವರಿಗಿತ್ತು. ವಿಶ್ವ ಶ್ರೇಷ್ಟ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರಾದ ಅಲೆಕ್ಸಾಂಡ್ರೊ ಗೊಂಜಾಲೆಸ್ ಇನ್ಯಾರಿತೊ ನಿರ್ದೇಶನ ಮಾಡಿರುವ ‘ಡಿಗ್ಗರ್’ ಸಿನಿಮಾದ ಪ್ರಮುಖವಾದ ಪಾತ್ರವೊಂದಕ್ಕೆ ಫಹಾದ್ ಫಾಸಿಲ್ ಅವರನ್ನು ಕೇಳಲಾಗಿತ್ತಂತೆ. ಖುದ್ದು ಆಸ್ಕರ್ ವಿಜೇತ ನಿರ್ದೇಶಕ ಅಲೆಕ್ಸಾಂಡ್ರೊ ಗೊಂಜಾಲೆಸ್ ಇನ್ಯಾರಿತೊ ಅವರೊಟ್ಟಿಗೆ ಫೋನಿನಲ್ಲಿ ಫಹಾದ್ ಮಾತನಾಡಿದರಂತೆ. ವಿಡಿಯೋ ಕಾಲ್ ಮೂಲಕ ಆಡಿಷನ್ ಸಹ ನೀಡಿದರಂತೆ.

ಫಹಾದ್ ಅವರ ನಟನೆ ಇಷ್ಟವಾಯ್ತಾದರೂ ಅವರ ಧ್ವನಿ, ಡೈಲಾಗ್ ಹೇಳುವ ರೀತಿ, ಆಕ್ಸೆಂಟ್ ಅಲೆಕ್ಸಾಂಡ್ರೊಗೆ ಇಷ್ಟವಾಗಲಿಲ್ಲವಂತೆ. ಅಮೆರಿಕಕ್ಕೆ ಬಂದು ಇಲ್ಲಿ ತರಬೇತಿ ತೆಗೆದುಕೊಳ್ಳುವಂತೆ ಫಹಾದ್ ಅವರಿಗೆ ಹೇಳಲಾಯ್ತಂತೆ. ಫಹಾದ್ ಸಹ ಸರಿ ಎಂದುಕೊಂಡರಂತೆ. ಆದರೆ ಆ ತರಬೇತಿ ಸೆಷನ್​​ನ ಸಂಪೂರ್ಣ ಖರ್ಚು ಫಹಾದ್ ಅವರೇ ನೋಡಿಕೊಳ್ಳಬೇಕಿತ್ತಂತೆ. ಅಲ್ಲದೆ, ನಾಲ್ಕು ತಿಂಗಳು ಭಾರತದಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳನ್ನು ಬಿಟ್ಟು ಅಮೆರಿಕಕ್ಕೆ ಹೋಗಿ ತರಬೇತಿ ಪಡೆಯುವುದು ಆ ನಂತರ ಹಲವು ತಿಂಗಳ ಕಾಲ ಅಮೆರಿಕದಲ್ಲಿದ್ದು ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುವುದು ಫಹಾದ್ ಅವರಿಗೆ ಬೇಡ ಎನಿಸಿತಂತೆ. ಒಪ್ಪಿಕೊಂಡಿರುವ ಸಿನಿಮಾಗಳು ಸಹ ಸಾಕಷ್ಟಿದ್ದವಂತೆ ಹಾಗಾಗಿ ಫಹಾದ್ ಅವರು ‘ಡಿಗ್ಗರ್’ ಸಿನಿಮಾ ಅವಕಾಶ ಕೈಬಿಟ್ಟಿರಂತೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯು’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ?

ಅಂದಹಾಗೆ ಫಹಾದ್ ಅವರು ಕೈಬಿಟ್ಟ ಪಾತ್ರ ರಿಜ್ ಅಹ್ಮದ್ ಕೈ ಸೇರಿದೆ. ಸಿನಿಮಾನಲ್ಲಿ ಅವರ ಪಾತ್ರದ ಹೆಸರು ಗಣೇಶ್. ಅಪ್ಪಟ ಭಾರತೀಯನ ಪಾತ್ರ ಅದು. ನಾಯಕ ಟಾಮ್ ಕ್ರೂಸ್ ಅವರ ಜೊತೆಗೇ ಇರುವ ಪಾತ್ರ ಅದಾಗಿದೆ. ಸಿನಿಮಾದ ಕತೆ ಒಬ್ಬ ಅತಿ ಶ್ರೀಮಂತ ಆಯಿಲ್ ಮೈನಿಂಗ್ ಮಾಲೀಕನ ಕುರಿತದ್ದಾಗಿದೆ. ಆತನ ಖಾಸಗಿ ಅಸ್ಟಿಂಟ್ ಪಾತ್ರದಲ್ಲಿ ನಟಿಸುವ ಅವಕಾಶ ಫಹಾದ್ ಅವರದ್ದಾಗಿತ್ತು. ಈಗ ಆ ಪಾತ್ರದಲ್ಲಿ ನಟಿಸಿರುವ ರಿಜ್ ಅಹ್ಮದ್, ಪಾಕಿಸ್ತಾನ ಮೂಲಕ ಬ್ರಿಟೀಷ್ ನಟ. ನಟನೆಗೆ ಆಸ್ಕರ್ ಮತ್ತು ಎಮ್ಮಿ ಸಹ ಗಳಿಸಿಕೊಂಡಿದ್ದಾರೆ. ಅಂದಹಾಗೆ ಫಹಾದ್ ಕೈಬಿಟ್ಟ ‘ಡಿಗ್ಗರ್’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *