ಅಲಹಾಬಾದ್, ಏಪ್ರಿಲ್ 17: ದ್ವಿಪೌರತ್ವದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಪ್ರಕರಣ ದಾಖಲಿಸಲು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಹಾಗೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.
ಉತ್ತರ ಪ್ರದೇಶ ಸರ್ಕಾರವು ಈ ಪ್ರಕರಣದ ಬಗ್ಗೆ ಸ್ವತಃ ತನಿಖೆ ನಡೆಸಬೇಕು ಅಥವಾ ಈ ವಿಷಯವನ್ನು ಕೇಂದ್ರೀಯ ಸಂಸ್ಥೆಗೆ ತನಿಖೆಗೆ ವಹಿಸಬೇಕು ಎಂದು ಹೈಕೋರ್ಟ್‌ನ ಲಕ್ನೋ ಪೀಠ ನಿರ್ದೇಶಿಸಿದೆ.
ಜನವರಿ 28ರಂದು ಲಕ್ನೋದ ವಿಶೇಷ ಸಂಸದ ಮತ್ತು ಶಾಸಕ ನ್ಯಾಯಾಲಯವು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆ ನಡೆಸಿದ ವೇಳೆ ರಾಹುಲ್ ಗಾಂಧಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೆಳ ನ್ಯಾಯಾಲಯ ನಿರಾಕರಿಸಿತ್ತು. ಪೌರತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಧರಿಸುವ ಅಧಿಕಾರ ತನಗೆ ಇಲ್ಲ ಎಂದಿದ್ದ ವಿಶೇಷ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನೂ ಓದಿ: Video: ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಸಮಸ್ಯೆ ಇಲ್ಲ ಎಂದ ರಾಹುಲ್ ಗಾಂಧಿ
ಈ ಬಗ್ಗೆ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್, ಈ ವಿಷಯದಲ್ಲಿ ಸರಿಯಾದ ಪರಿಶೀಲನೆಯ ಅಗತ್ಯವಿದೆ ಎಂದು ಹೇಳಿದೆ. ಕಾನೂನಿನ ಪ್ರಕಾರ ಈ ವಿಷಯವನ್ನು ಪರಿಶೀಲಿಸುವಂತೆ ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಏನಿದು ಪ್ರಕರಣ?:
ಈ ಪ್ರಕರಣವು ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ಹೊಂದಿರಬಹುದು ಎಂಬ ಆರೋಪಗಳಿಗೆ ಸಂಬಂಧಿಸಿದೆ. ಭಾರತೀಯ ಕಾನೂನಿನಡಿಯಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಇಂಗ್ಲೆಂಡ್ ಮೂಲದ ಕಂಪನಿಗೆ ಸಂಬಂಧಿಸಿದ ದಾಖಲೆಗಳನ್ನು ಉಲ್ಲೇಖಿಸಿ ದೂರು ನೀಡಲಾಗಿದೆ. ಅಲ್ಲಿ ಅವರನ್ನು ಬ್ರಿಟಿಷ್ ಪ್ರಜೆ ಎಂದು ಉಲ್ಲೇಖಿಸಲಾಗಿದೆ. ಅವರ ಅಧಿಕೃತ ದಾಖಲಾತಿಗಳಲ್ಲಿ ಲಂಡನ್ ವಿಳಾಸವನ್ನು ಕೂಡ ಪಟ್ಟಿ ಮಾಡಲಾಗಿದೆ. ಪೌರತ್ವ, ಪಾಸ್‌ಪೋರ್ಟ್‌ಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾನೂನುಗಳು ಸೇರಿದಂತೆ ವಿವಿಧ ಕಾನೂನು ನಿಬಂಧನೆಗಳ ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ವಿವರವಾದ ತನಿಖೆಗಾಗಿ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿಯ ಪೌರತ್ವ ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಕರ್ನಾಟಕದ ನಿವಾಸಿಯಾಗಿರುವ ಅರ್ಜಿದಾರರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಅಧಿಕೃತ ರಹಸ್ಯ ಕಾಯ್ದೆ, ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಿ ಎಫ್‌ಐಆರ್ ದಾಖಲಿಸಿ ವಿವರವಾದ ತನಿಖೆ ನಡೆಸುವಂತೆ ಕೋರಿದ್ದಾರೆ.
ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಸಾಬೀತುಪಡಿಸುವ ದಾಖಲೆಗಳು ಮತ್ತು ಬ್ರಿಟಿಷ್ ಸರ್ಕಾರದ ಕೆಲವು ಇಮೇಲ್‌ಗಳು ತಮ್ಮ ಬಳಿ ಇವೆ. ಈ ಕಾರಣದಿಂದಾಗಿ ಅವರು ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು. ಅವರು ಲೋಕಸಭಾ ಸದಸ್ಯ ಹುದ್ದೆಯನ್ನು ಹೊಂದಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
