ಧರ್ಮದ ಹೆಸರಿನಲ್ಲಿ ಕ್ರೂರತೆ; ಅಂಕಿತ್ ಶರ್ಮಾ ಕೊಲೆ ಪ್ರಕರಣದಲ್ಲಿ ಆಪ್ ನಾಯಕ ತಾಹಿರ್ ಹುಸೇನ್​ಗೆ ಜೀವಾವಧಿ ಶಿಕ್ಷೆ – Kannada News | Delhi riots; Former AAP leader Tahir Hussain gets life term in IB official Ankit Sharma murder case

ನವದೆಹಲಿ, ಜುಲೈ 31: 2020ರ ಈಶಾನ್ಯ ದೆಹಲಿ ದಂಗೆಯ (Delhi Riots) ವೇಳೆ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿ ಅಂಕಿತ್ ಶರ್ಮಾ (Ankit Sharma) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ಮಾಜಿ ನಾಯಕ ತಾಹಿರ್ ಹುಸೇನ್ ಮತ್ತು ಇತರ ನಾಲ್ವರಿಗೆ ದೆಹಲಿಯ ನ್ಯಾಯಾಲಯ ಇಂದು (ಶುಕ್ರವಾರ) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜುಲೈ 13ರಂದು ಕರ್ಕರ್ಡೂಮಾ ನ್ಯಾಯಾಲಯವು ಅಂಕಿತ್ ಶರ್ಮಾ ಅವರ ಕೊಲೆ ಮತ್ತು ಕ್ರಿಮಿನಲ್ ಸಂಚು ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ತಾಹಿರ್ ಹುಸೇನ್, ನಾಜಿಮ್, ಖಾಸಿಮ್, ಜಾವೇದ್ ಮತ್ತು ಅನಾಸ್ ಅವರನ್ನು ಅಪರಾಧಿಗಳು ಎಂದು ಘೋಷಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, “ಈ ಅಪರಾಧವನ್ನು ಎಸಗಿದ ರೀತಿ ಅತ್ಯಂತ ಕ್ರೂರತೆಯಿಂದ ಕೂಡಿತ್ತು. ಕೇವಲ ಧರ್ಮದ ಆಧಾರದ ಮೇಲೆಯೇ ಇದನ್ನು ಮಾಡಲಾಗಿದೆ” ಎಂದು ಹೇಳಿದೆ. ದೆಹಲಿಯ ಕರ್ಕರ್ಡೂಮಾ ನ್ಯಾಯಾಲಯವು ಕೊಲೆಯ ಭೀಕರತೆಯ ಬಗ್ಗೆ ವಿವರಿಸಿದ್ದು, “ಅಂಕಿತ್ ಶರ್ಮಾ ಅವರ ಮೃತದೇಹವನ್ನು ಪ್ರಾಣಿಯಂತೆ ಎಳೆಯಲಾಯಿತು” ಎಂದು ಹೇಳಿದೆ.

ಫೆಬ್ರವರಿ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದ ನಡುವೆ ಚರಂಡಿಯಲ್ಲಿ ಅಂಕಿತ್ ಶರ್ಮಾ ಅವರ ಮೃತದೇಹ ಪತ್ತೆಯಾಗಿತ್ತು. ಈ ಕೊಲೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಮತ್ತು ಇತರ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ ನಂತರ ಈ ಶಿಕ್ಷೆ ಹೊರಬಿದ್ದಿದೆ. 26 ವರ್ಷದ ಇಂಟೆಲಿಜೆನ್ಸ್ ಬ್ಯೂರೋ ಸಿಬ್ಬಂದಿಯ ಭೀಕರ ಕೊಲೆಯು ದಂಗೆಗೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾದ ಪ್ರಕರಣಗಳಲ್ಲಿ ಒಂದಾಗಿತ್ತು. ಅಂಕಿತ್ ಶರ್ಮಾ ಅವರ ಮೇಲೆ ಗುಂಪು ದಾಳಿ ನಡೆಸಿ ಕೊಲೆ ಮಾಡಿದೆ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದರೆ, ತಾಹಿರ್ ಹುಸೇನ್ ವಿಚಾರಣೆಯುದ್ದಕ್ಕೂ ತಾವು ನಿರಪರಾಧಿ ಎಂದು ಪ್ರತಿಪಾದಿಸುತ್ತಲೇ ಬಂದಿದ್ದರು.

ಇದನ್ನೂ ಓದಿ: ಕೆಂಪು ಬಾರ್ಡರ್​ನ ಬಿಳಿ ಸೀರೆ, ಹಣೆಯ ಮೇಲೆ ಬಿಂದಿ, ಮುಖದಲ್ಲಿ ನಗು, 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಬಂದ ತಸ್ಲೀಮಾ ನಸ್ರೀನ್

ಚಾರ್ಜ್‌ಶೀಟ್ ಪ್ರಕಾರ, ಫೆಬ್ರವರಿ 25ರಂದು ಸಂಜೆ 5 ಗಂಟೆಗೆ ತಾಹಿರ್ ಹುಸೇನ್ ನಿವಾಸದ ಬಳಿ 2 ಗುಂಪುಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಅಂಕಿತ್ ಶರ್ಮಾ ಯತ್ನಿಸುತ್ತಿದ್ದಾಗ, ಅವರನ್ನು ಗುಂಪೊಂದು ಸುತ್ತುವರಿದು ಈ ಕೃತ್ಯ ಎಸಗಿತ್ತು.

ತಾಹಿರ್ ಹುಸೇನ್ ಮೇಲಿದ್ದ ಆರೋಪಗಳು:

ದಂಗೆಯ ಸಮಯದಲ್ಲಿ ಶತ್ರುತ್ವವನ್ನು ಉತ್ತೇಜಿಸುವುದು, ಗಲಭೆ ಎಬ್ಬಿಸುವುದು, ಹಲ್ಲೆ ನಡೆಸುವುದು, ಕ್ರಿಮಿನಲ್ ಬಲಪ್ರಯೋಗ, ಕ್ರಿಮಿನಲ್ ಸಂಚು ರೂಪಿಸುವುದು ಮತ್ತು ಅಂಕಿತ್ ಶರ್ಮಾ ಅವರ ಕೊಲೆ ಮಾಡಿದ ಆರೋಪಗಳ ಅಡಿಯಲ್ಲಿ ನ್ಯಾಯಾಲಯವು ತಾಹಿರ್ ಹುಸೇನ್‌ ಅವರನ್ನು ಅಪರಾಧಿ ಎಂದು ಹೇಳಿದೆ. ತಾಹಿರ್ ಹುಸೇನ್ ವಿರುದ್ಧ ಎಫ್‌ಐಆರ್ ದಾಖಲಾದ ತಕ್ಷಣ ಆಮ್ ಆದ್ಮಿ ಪಕ್ಷವು ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ನ್ಯಾಯಾಲಯದ ಈ ತೀರ್ಪಿನ ನಂತರ ಅಮಾನತುಗೊಳಿಸಿದ ಕ್ಷಣದಿಂದಲೇ ಅವರೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲಾಗಿದೆ ಎಂದು ಆಪ್ ಪುನರುಚ್ಚರಿಸಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ

ಏನಿದು ಪ್ರಕರಣ?:

ಕೋಮು ಹಿಂಸಾಚಾರದ ಸಮಯದಲ್ಲಿ ತಾಹಿರ್ ಹುಸೇನ್ ಮತ್ತು ಇತರ ಅಪರಾಧಿಗಳು ಕಾನೂನುಬಾಹಿರವಾಗಿ ಗುಂಪು ಕಟ್ಟಿಕೊಂಡು, ಅಂಕಿತ್ ಶರ್ಮಾ ಅವರನ್ನು ಅಪಹರಿಸಿ ಕೊಲೆ ಮಾಡಿದ್ದರು. ಅಂಕಿತ್ ಶರ್ಮಾ ಅವರ ತಂದೆ ರವೀಂದರ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ 2020ರ ಫೆಬ್ರವರಿ 26ರಂದು ಪ್ರಕರಣ ದಾಖಲಾಗಿತ್ತು. ಫೆಬ್ರವರಿ 25ರಂದು ತಮ್ಮ ಮಗ ಕೆಲಸ ಮುಗಿಸಿ ಮನೆಗೆ ಬಂದ ನಂತರ ಸಂಜೆ 5 ಗಂಟೆಗೆ ಗೃಹಬಳಕೆಯ ವಸ್ತುಗಳನ್ನು ತರಲು ಹೊರಗೆ ಹೋಗಿದ್ದನು ಎಂದು ತಿಳಿಸಿದ್ದರು. ಅವರು ಮನೆಗೆ ಹಿಂತಿರುಗದಿದ್ದಾಗ, ಕುಟುಂಬದವರು ಹತ್ತಿರದ ಪ್ರದೇಶಗಳು ಮತ್ತು ಆಸ್ಪತ್ರೆಗಳಲ್ಲಿ ಹುಡುಕಾಟ ನಡೆಸಿ ಮರುದಿನ ಬೆಳಿಗ್ಗೆ ದೂರು ದಾಖಲಿಸಿದ್ದರು.

ಇದಾದ ನಂತರ ಅಂಕಿತ್ ಶರ್ಮಾ ಅವರ ಮೃತದೇಹ ಹತ್ತಿರದ ಚರಂಡಿಯಲ್ಲಿ ಪತ್ತೆಯಾಗಿತ್ತು. ಗುರುತನ್ನು ಮರೆಮಾಚುವ ಉದ್ದೇಶದಿಂದ ಅಪರಾಧಿಗಳು ಅವರ ಮುಖ ಸೇರಿದಂತೆ ದೇಹದ ಭಾಗಗಳನ್ನು ಆಸಿಡ್‌ನಿಂದ ಸುಟ್ಟಿದ್ದರು ಎಂದು ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದ್ದರು. ದೆಹಲಿ ಗಲಭೆಗೆ ಸಂಬಂಧಿಸಿದ ತನಿಖೆಗಳಲ್ಲಿ ಇದು ಅತ್ಯಂತ ಪ್ರಮುಖ ಮತ್ತು ಹೈ-ಪ್ರೊಫೈಲ್ ಪ್ರಕರಣಗಳಲ್ಲಿ ಒಂದಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *