ಆದಿಶೇಷ ನಾರಾಯಣ, ಕೃಷ್ಣಪ್ಪ, ಅಯ್ಯಪ್ಪImage Credit source: tv9
ಮಂಗಳೂರು, ಜುಲೈ 30: ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ (Dharmasthala Mass burial Case) ಮಹತ್ವದ ಬೆಳವಣಿಗೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ ನಡೆಸಿದ ಉತ್ಖನನದ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ಗುರುತು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮೂವರ ಕುಟುಂಬಸ್ಥರಿಂದ ಸಂಗ್ರಹಿಸಿದ್ದ ಡಿಎನ್‌ಎ ಮಾದರಿಗಳನ್ನು ಅಸ್ಥಿಪಂಜರಗಳ ಡಿಎನ್‌ಎ ಜತೆ ಹೋಲಿಕೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಮೂರು ಅಸ್ಥಿಪಂಜರಗಳ ಡಿಎನ್‌ಎ ಕುಟುಂಬಸ್ಥರ ಮಾದರಿಗಳೊಂದಿಗೆ ಹೊಂದಾಣಿಕೆಯಾಗಿದೆ ಎಂದು ತಿಳಿದುಬಂದಿದೆ.
ಪತ್ತೆಯಾದವರು ಯಾರು?
ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ದೃಢಪಟ್ಟಿರುವವರ ಪೈಕಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿಯ ಆದಿಶೇಷ (27) ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ಕೃಷ್ಣಪ್ಪ (85) ಸೇರಿದ್ದಾರೆ. ಅಂದರೆ, ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ಪತ್ತೆಯಾದ ಮೂವರೂ ಪುರುಷರು ಎಂಬುದು ದೃಢಪಟ್ಟಿದೆ. ಇವರ ಪೈಕಿ ಅಯ್ಯಪ್ಪ ಮತ್ತು ಕೃಷ್ಣಪ್ಪ 70 ವರ್ಷ ಮೇಲ್ಪಟ್ಟವರಾಗಿದ್ದಾರೆ.
‘ಮಹಿಳೆಯರ ಅಸ್ಥಿಪಂಜರ’ ಆರೋಪಕ್ಕೆ ವ್ಯತಿರಿಕ್ತ ಬೆಳವಣಿಗೆ
ಧರ್ಮಸ್ಥಳದ ಆಸುಪಾಸಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಿತ್ತು. ಆದರೆ ಎಸ್‌ಐಟಿ ಉತ್ಖನನದ ವೇಳೆ ಪತ್ತೆಯಾದ ಅಸ್ಥಿಪಂಜರಗಳ ಪೈಕಿ ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ದೃಢಪಟ್ಟಿರುವ ಮೂವರೂ ಪುರುಷರು ಎಂಬುದು ಇದೀಗ ತಿಳಿದುಬಂದಿದೆ. ಜುಲೈ 15ರಂದು ಎಸ್‌ಐಟಿ ಅಧಿಕಾರಿಗಳು ಸಲ್ಲಿಸಿದ್ದ ವರದಿಯಲ್ಲಿ ಅಸ್ಥಿಪಂಜರಗಳ ಗುರುತು ಪತ್ತೆ ಹಾಗೂ ಡಿಎನ್‌ಎ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖಿಸಲಾಗಿದೆ.
ಮೂವರ ಕುಟುಂಬಸ್ಥರ ಡಿಎನ್‌ಎ ಮಾದರಿಗಳನ್ನು ಪಡೆದು ನಡೆಸಿದ ಪರೀಕ್ಷೆಯಲ್ಲಿ ಅಸ್ಥಿಪಂಜರಗಳೊಂದಿಗೆ ಹೊಂದಾಣಿಕೆ ಕಂಡುಬಂದಿದೆ. ಎಸ್‌ಐಟಿಗೆ ಮನವಿ ಸಲ್ಲಿಸಿದಲ್ಲಿ, ಸಂಬಂಧಪಟ್ಟ ಕುಟುಂಬಸ್ಥರಿಗೆ ಅಸ್ಥಿಪಂಜರಗಳನ್ನು ಪಡೆಯಲು ಅವಕಾಶ ನೀಡಬಹುದು ಎಂದು ತಿಳಿದುಬಂದಿದೆ.
ಮೂವರು ನಾಪತ್ತೆಯಾಗಿದ್ದು ಯಾವಾಗ, ಎಲ್ಲಿ?
ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ದೃಢಪಟ್ಟಿರುವ ಕೊಡಗು ಜಿಲ್ಲೆಯ ಯು.ಬಿ. ಅಯ್ಯಪ್ಪ (70) ಅವರು 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದರು. ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ. ಈ ಸಂಬಂಧ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಆದಿಶೇಷ ನಾರಾಯಣ (27) ಅವರು ಬೆಂಗಳೂರಿನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. 2013ರ ಅಕ್ಟೋಬರ್ 2ರಂದು ಮನೆಗೆ ವಾಪಸ್ ಬಂದು ಮೊಬೈಲ್ ಇಟ್ಟು ಬಳಿಕ ನಾಪತ್ತೆಯಾಗಿದ್ದರು. ಈ ಹಿಂದೆ ಪದೇಪದೆ ಮನೆ ಬಿಟ್ಟು ಹೋಗುತ್ತಿದ್ದ ಕಾರಣ, ಅವರು ಮರಳಿ ಬರುತ್ತಾರೆ ಎಂದು ಕುಟುಂಬಸ್ಥರು ಆರಂಭದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿರಲಿಲ್ಲ.
ಇನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ಕೃಷ್ಣಪ್ಪ (85) ಅವರು ವಯಸ್ಸಿನ ಕಾರಣದಿಂದ ಮನೆಯಲ್ಲೇ ಇರುತ್ತಿದ್ದರು. 2024ರ ಅಕ್ಟೋಬರ್ 22ರಂದು ಏಕಾಏಕಿ ಮನೆಯಿಂದ ಹೊರಹೋದ ಅವರು ಬಳಿಕ ವಾಪಸ್ ಬಂದಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಸಿಕ್ಕ 7 ಬುರುಡೆಗಳ ರಹಸ್ಯ ಪತ್ತೆಯೇ ಎಸ್‌ಐಟಿ ಅಧಿಕಾರಿಗಳಿಗೀಗ ಸವಾಲು
ಹೀಗೆ ಮೂವರ ನಾಪತ್ತೆ ಪ್ರಕರಣಗಳ ಹಿನ್ನೆಲೆ ಇದೀಗ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಡಿಎನ್‌ಎ ಜತೆ ಹೊಂದಾಣಿಕೆಯಾಗಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
