ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ Image Credit source: tv9 kannada
ಮಂಗಳೂರು, ಜೂನ್ 07: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಮಾಸ್ಕ್ಮ್ಯಾನ್ ಚಿನ್ನಯ್ಯ, ತಮ್ಮದೇ ಬುರುಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಾನೆ. 200 ಕೋಟಿ ರೂ ಫಂಡಿಂಗ್ ಮತ್ತು ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಕೂಡ ಸಲ್ಲಿದ್ದಾನೆ. ಇದೀಗ ಗಿರೀಶ್ ಮಟ್ಟಣ್ಣನವರ್ (Girish Mattannavar), ಚಿನ್ನಯ್ಯ ಬ್ರೈನ್ ಮ್ಯಾಪಿಂಗ್ ಮತ್ತು ಆತ ಸಲ್ಲಿರುವ ರಿಟ್ ಅರ್ಜಿ ಮೇಲೆ ತನಿಖೆ ಮಾಡುವಂತೆ ಎಸ್ಐಟಿಗೆ ದೂರು ನೀಡಿದ್ದಾರೆ.
ಮುಖ್ಯಾಂಶಗಳು
- ಚಿನ್ನಯ್ಯ ವಿರುದ್ಧ ಮಟ್ಟಣ್ಣನವರಿಂದ SITಗೆ ದೂರು
- ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ಗೆ ಒತ್ತಾಯ
- ಚಿನ್ನಯ್ಯನ ಬಳಿ ಕೈ-ಕಾಲು ಒತ್ತಿಸಿಕೊಂಡಿದ್ದು ನಿಜ ಎಂದ ಮಟ್ಟಣ್ಣನವರ್
ಧರ್ಮಸ್ಥಳ ವಿರುದ್ಧ ಬುರುಡೆ ಗ್ಯಾಂಗ್ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ್ ಮತ್ತು ಯೂಟ್ಯೂಬರ್ ಅಭಿಷೇಕ್ ಚಿನ್ನಯ್ಯ ವಿರುದ್ಧ ದೂರು ನೀಡಿದ್ದಾರೆ.
ಚಿನ್ನಯ್ಯನ ಮೇಲೆ ದೂರು ನೀಡಿದ ಗಿರೀಶ್ ಮಟ್ಟಣ್ಣನವರ್
ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡವಂತೆ ಎಸ್ಐಟಿಗೆ ದೂರು ನೀಡಿರುವ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯನ ಹೇಳಿಕೆ ಪ್ರಕಾರ ನಮ್ಮೆಲ್ಲರನ್ನು ತನಿಖೆಗೆ ಒಳಪಡಿಸಬೇಕು. ನನ್ನ ಬ್ರೈನ್ ಮ್ಯಾಪಿಂಗ್ನ್ನು ಲೈವ್ನಲ್ಲಿ ಮಾಡಲಿ ಎಂದು ಹೇಳಿದ್ದಾರೆ. 200 ಕೋಟಿ ರೂ ಹಣದ ತನಿಖೆ ಸೇರಿದಂತೆ ಆತ ಸಲ್ಲಿಸಿರುವ ರಿಟ್ ಅರ್ಜಿ ಮೇಲೆ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಆತನ ಜಾಮೀನು ಅರ್ಜಿ ರದ್ದು ಮಾಡಲು ನ್ಯಾಯಾಲಯಕ್ಕೆ ಎಸ್ಐಟಿ ಅರ್ಜಿ ಹಾಕಬೇಕು ಮತ್ತು ಚಿನ್ನಯ್ಯನಿಗೆ ಪೊಲೀಸ್ ಭದ್ರತೆ ನೀಡಬೇಕು ಎಂದು ಗಿರೀಶ್ ಮಟ್ಟಣ್ಣನವರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಹೇಳಿದ್ದಿಷ್ಟು
ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯನ ಬೇಡಿಕೆಯಂತೆ ಚಂದ್ರಶೇಖರ್ ಸ್ವಾಮೀಜಿ ಬಳಿ ನಾವು ಹೋಗಿದ್ದು ನಿಜ. ಪಾಯಿಂಟ್ ತೋರಿಸುವಾಗ ಎಲ್ಲೆಲ್ಲೋ ಹೋಗುತ್ತಿದ್ದೇನೆ. ಕಣ್ಣು ಮಂಜು ಮಂಜಾಗುತ್ತಿದೆ ಅಂತಾ ಚಿನ್ನಯ್ಯ ಹೇಳಿದ್ದ. ಹೀಗಾಗಿ ಮಾಟ, ಮಂತ್ರ ಸಂಬಂಧ ಚಂದ್ರಶೇಖರ ಸ್ವಾಮೀಜಿ ಬಳಿ ಹೋಗಿದ್ವಿ. ಅವರು ಯಾವ ಪೊಲೀಸರಿಗೂ ಶಿಫಾರಸ್ಸು ಮಾಡಿಲ್ಲ ಎಂದಿದ್ದಾರೆ.
ಪ್ರಕಾಶ್ ರಾಜ್ ಅವರೇ ಅದನ್ನು ಹೇಳುತ್ತಾರೆ
ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಬೆಂಬಲ ವಿಚಾರವಾಗಿ ಮಾತನಾಡಿದ ಅವರು,
ಪ್ರಕಾಶ್ ರಾಜ್ ಕರೆ ಮಾಡಿದ್ದ ವಿಚಾರ ನಾನು ಹೇಳಲ್ಲ. ಪ್ರಕಾಶ್ ರಾಜ್ ಅವರೇ ಅದನ್ನು ಹೇಳುತ್ತಾರೆ. ನೈತಿಕವಾಗಿ ಸಾಕಷ್ಟು ಜನ ಬೆಂಬಲ ಕೊಟ್ಟಿದ್ದಾರೆ ಎಂದರು.
ಚಿನ್ನಯ್ಯನ ಬಳಿ ಕೈ-ಕಾಲು ಒತ್ತಿಸಿಕೊಂಡಿದ್ದು ನಿಜ ಎಂದ ಮಟ್ಟಣ್ಣನವರ್
ಇನ್ನು ಚಿನ್ನಯ್ಯನಿಗೆ ಹಿಂಸೆ ಕೊಟ್ಟು ಕೈ-ಕಾಲು ಒತ್ತಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚಿನ್ನಯ್ಯನ ಬಳಿ ಕೈ-ಕಾಲು ಒತ್ತಿಸಿಕೊಂಡಿದ್ದು ನಿಜ. ಆತ ನಮ್ಮ ಜೊತೆ ಬಹಳ ಪ್ರೀತಿಯಿಂದ ಇದ್ದ. ನಾವು ಬೇಡ ಅಂದ್ರು ಕಾಲು ಒತ್ತುತ್ತಿದ್ದ. ನನಗೆ ಕಾಲು ನೋವಿದ್ದು ನನ್ನ ಪತ್ನಿ ಒಂದು ತೈಲ ಕೊಟ್ಟಿದ್ದರು. ಅದು ಚಿನ್ನಯ್ಯನಿಗೆ ಗೊತ್ತಿತ್ತು. ಆದ್ರಿಂದ ಆತನೇ ಹಿಂದೆ ಬಿದ್ದು ನನ್ನ ಕಾಲನ್ನು ಒತ್ತುತ್ತಿದ್ದ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
