ನವದೆಹಲಿ, ಜುಲೈ 24: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಗೆ ಸಂಬಂಧಿಸಿದಂತೆ, ರಾಷ್ಟ್ರ ರಾಜಧಾನಿಯಲ್ಲಿ ಹಿರಿಯ ಕೇಂದ್ರ ಸಚಿವರು ಮತ್ತು ಪ್ರತಿಭಟನಾಕಾರರ ಪ್ರತಿನಿಧಿಗಳ ನಡುವೆ ನಡೆದ ಸಭೆಯ ಬಳಿಕ, ತಮ್ಮ ಪ್ರಮುಖ ಬೇಡಿಕೆಯ ಕುರಿತು ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರವು ಶನಿವಾರ ಮಧ್ಯಾಹ್ನದವರೆಗೆ ಕಾಲಾವಕಾಶ ಕೋರಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಮಾಹಿತಿ ನೀಡಿದೆ. ಈ ಸಭೆಯಲ್ಲಿ ಸರ್ಕಾರದ ಪರವಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಪಿಎಮ್‌ಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಭಾಗವಹಿಸಿದ್ದರೆ, ಸಿಜೆಪಿ ಪರವಾಗಿ ಅದರ ರಾಷ್ಟ್ರೀಯ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಭಾಗವಹಿಸಿದ್ದರು.
ಇಂದು (ಶುಕ್ರವಾರ) ಮಧ್ಯಾಹ್ನ ‘ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ದಲ್ಲಿ ನಡೆದ ಸಭೆಯ ನಂತರ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಯ ಕುರಿತು ತೀರ್ಮಾನಿಸಲು ಕೇಂದ್ರ ಸರ್ಕಾರವು ಶನಿವಾರ ಮಧ್ಯಾಹ್ನದವರೆಗೆ ಕಾಲಾವಕಾಶ ಕೋರಿದೆ ಎಂದು ಸಿಜೆಪಿ ತಿಳಿಸಿದೆ.
ಸಭೆಯಲ್ಲಿ ಏನೇನಾಯ್ತು?:
“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಾಳೆ ಮಧ್ಯಾಹ್ನದವರೆಗೆ ಸಮಯ ಕೇಳಿದೆ. ಸರ್ಕಾರ ಅವರನ್ನು ಶೀಘ್ರದಲ್ಲೇ ಹುದ್ದೆಯಿಂದ ತೆಗೆದುಹಾಕುತ್ತದೆ ಎಂಬ ಭರವಸೆ ನಮಗಿದೆ. ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಒದಗಿಸುವುದು ಮತ್ತು ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಾಗೂ ಕಾನೂನು ಪ್ರಕರಣಗಳನ್ನು ಹಿಂಪಡೆಯುವ ಎರಡು ಬೇಡಿಕೆಗಳಿಗೆ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ” ಎಂದು ಸಿಜೆಪಿ ನಾಯಕ ಅಶುತೋಷ್ ರಾಂಕಾ ಹೇಳಿದ್ದಾರೆ.
ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ನಮ್ಮ ಪ್ರತಿಭಟನೆ: ಅಭಿಜಿತ್ ದೀಪ್ಕೆ
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ನಿಯೋಗವು ತನ್ನ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೇ ನಮ್ಮ ಪ್ರಮುಖ ಮತ್ತು ಮುಖ್ಯ ಬೇಡಿಕೆಯಾಗಿದೆ ಎಂದು ತಿಳಿಸಿದರು. “ನಮ್ಮ ಮೊದಲ ಬೇಡಿಕೆಯೇ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ. ಇದರ ಜೊತೆಗೆ, ನೀಟ್ (NEET) ಪರೀಕ್ಷೆಯ ಅಕ್ರಮದಿಂದಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಯುವಕರ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಕಾನೂನು ಪ್ರಕರಣಗಳನ್ನು ದಾಖಲಿಸಬಾರದು. ಈಗಾಗಲೇ ದಾಖಲಾಗಿದ್ದರೆ ಅವುಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ನಾವು ಆಗ್ರಹಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಪರೀಕ್ಷಾ ಅಕ್ರಮದಿಂದ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂಬ ಎರಡು ಷರತ್ತುಬದ್ಧ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ನಂತರವೇ ಸಿಜೆಪಿ ಮಾತುಕತೆಗೆ ಸಮ್ಮತಿಸಿತ್ತು.
ಇದನ್ನೂ ಓದಿ: ಪ್ರತಿಭಟನಾಕಾರರು ಮಾತುಕತೆಗೆ ನನ್ನ ಮನೆ, ಕಚೇರಿಗೆ ಬರಬಹುದು; ಕೇಂದ್ರ ಸಚಿವ ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ ಪ್ರತಿಕ್ರಿಯೆ:
ಸಿಜೆಪಿ ವಕ್ತಾರರ ಜೊತೆಗಿನ ಸಭೆಯ ನಂತರ ಮಾತನಾಡಿದ ಕೇಂದ್ರ ಸಚಿವ ಜೆ.ಪಿ. ನಡ್ಡಾ, “ಮಾತುಕತೆ ಸುಮಾರು 2 ಗಂಟೆಗಳ ಕಾಲ ನಡೆಯಿತು. ಅವರು 3 ಪ್ರಮುಖ ಬೇಡಿಕೆಗಳು ಮತ್ತು ಪರೀಕ್ಷಾ ಸುಧಾರಣೆಗಾಗಿ 5 ಸಲಹೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ನಾವು ನಾಳೆ ಮಧ್ಯಾಹ್ನ ಮತ್ತೆ ಭೇಟಿಯಾಗಲಿದ್ದು, ಸರ್ಕಾರದ ಮಟ್ಟದಲ್ಲಿ ನಡೆಸಿದ ಚರ್ಚೆಯ ವಿವರಗಳನ್ನು ಅವರಿಗೆ ತಿಳಿಸಲಿದ್ದೇವೆ” ಎಂದಿದ್ದಾರೆ.
ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯ:
ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದಿಂದ ಲಿಖಿತ ಭರವಸೆ ಲಭಿಸಿದ ನಂತರ, ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ನಿನ್ನೆ ತಡರಾತ್ರಿ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಸಭೆ ನಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
