‘ಧುರಂಧರ್ 2’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಮೇಲೆ ಕೃತಿಚೌರ್ಯದ (Plagiarism) ಆರೋಪ ಎದುರಾಗಿತ್ತು. ನಿರ್ದೇಶಕ ಸಂತೋಷ್ ಕುಮಾರ್ ಅವರು ಈ ಆರೋಪ ಮಾಡಿದ್ದರು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಸಂತೋಷ್ ಕುಮಾರ್ ಮೇಲೆ ಆದಿತ್ಯ ಧರ್ (Aditya Dhar) ಅವರು ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆದಿದೆ. ಪರಸ್ಪರ ಮಾತುಕತೆಯ ಮೂಲಕ ಈ ವಿವಾದ ಬಗೆಹರಿಸಿಕೊಳ್ಳುವಂತೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ಆದಿತ್ಯ ಧರ್ ಅವರು ‘ಧುರಂಧರ್ 2’ ಚಿತ್ರದ ಕಥೆಯನ್ನು ತಮ್ಮ ಸ್ಕ್ರಿಪ್ಟ್‌ನಿಂದ ನಕಲು ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ಅವರು ಬಹಿರಂಗವಾಗಿ ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿದ ನಿರ್ದೇಶಕ ಆದಿತ್ಯ ಧರ್, ‘ಇದು ನನ್ನ ಘನತೆಗೆ ಧಕ್ಕೆ ತರುವಂತಹ ಸುಳ್ಳು ಆರೋಪ’ ಎಂದು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ನ್ಯಾಯಮೂರ್ತಿ ಅರಿಫ್ ಡಾಕ್ಟರ್ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. ಬೌದ್ಧಿಕ ಆಸ್ತಿ ಹಕ್ಕು ಅಥವಾ ಕಥೆಯ ಮಾಲೀಕತ್ವದ ಬಗ್ಗೆ ಗೊಂದಲವಿದ್ದರೆ ಅದನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂತೋಷ್ ಕುಮಾರ್ ಅವರಿಗೆ ಈ ಸ್ಕ್ರಿಪ್ಟ್ ತಮ್ಮದು ಎಂಬ ನಂಬಿಕೆಯಿದ್ದರೆ, ಸಿವಿಲ್ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅವರಿಗೆ ಅವಕಾಶ ಇದೆ. ಇಂತಹ ವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಂಡರೆ ಅದು ದೀರ್ಘಕಾಲದ ಕಾನೂನು ಹೋರಾಟವನ್ನು ತಪ್ಪಿಸುತ್ತದೆ ಎಂದು ಕೋರ್ಟ್ ಹೇಳಿದೆ. ಆದ್ದರಿಂದ ವಿವಾದ ಅಂತ್ಯವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಥೆ ಕದ್ದ ಆರೋಪ: ಆದಿತ್ಯ ಧರ್ ಬಗ್ಗೆ ಹೇಳಿಕೆ ನೀಡದಂತೆ ಸಂತೋಷ್ ಕುಮಾರ್ಗೆ ಕೋರ್ಟ್ ಆದೇಶ
ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸಂತೋಷ್ ಕುಮಾರ್ ಅವರು ಆದಿತ್ಯ ಧರ್ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡಬಾರದು ಎಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದಿತ್ಯ ಧರ್ ಪರ ಹಿರಿಯ ವಕೀಲ ಬೀರೇಂದ್ರ ಸರಫ್ ವಾದ ಮಂಡಿಸಿದ್ದರು. ಈಗ ಹೈಕೋರ್ಟ್ ನೀಡಿರುವ ಸಂಧಾನದ ಸಲಹೆಗೆ ಉಭಯ ಪಕ್ಷಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
