
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ದಿನದಿಂದಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಈಗಾಗಲೇ ಜಾಗತಿಕವಾಗಿ 1,300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ಹಳೇ ದಾಖಲೆಗಳನ್ನೆಲ್ಲ ಮುರಿದಿದೆ. ಆದರೆ, ಈ ಯಶಸ್ಸಿನ ನಡುವೆಯೂ ಬಾಲಿವುಡ್ ಮಂದಿ ತೋರುತ್ತಿರುವ ಮೌನ ಈಗ ಚರ್ಚೆಗೆ ಕಾರಣವಾಗಿದೆ. ಸದಾ ವಿವಾದಿತ ಹೇಳಿಕೆಗಳಿಂದ ಸುದ್ದಿ ಆಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಅವರು ಬಾಲಿವುಡ್ ಮಂದಿಯ ಈ ಮೌನದ ವಿರುದ್ಧ ಕಿಡಿಕಾರಿದ್ದಾರೆ.
ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವರ್ಮಾ, ‘ಆದಿತ್ಯ ಧರ್ ಈಗಾಗಲೇ ಚಿತ್ರರಂಗದ ಅಡಿಯಲ್ಲಿ ಪರಮಾಣು ಬಾಂಬ್ ಸಿಡಿಸಿದ್ದಾರೆ. ಆದರೆ ಇಡೀ ಇಂಡಸ್ಟ್ರಿ ಈ ಬಗ್ಗೆ ವಹಿಸಿರುವ ಭಯಾನಕ ಮೌನ ನನಗೆ ಆಘಾತ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ‘ಈ ಸಿನಿಮಾವನ್ನು ನೋಡಿ ಕಲಿಯಿರಿ’ ಎಂದು ಅವರು ಕಿವಿಮಾತು ಹೇಳಿದ್ದಾರೆ.
‘ಧುರಂಧರ್ 2 ಸಿನಿಮಾದ ಸ್ಫೋಟಕ್ಕೆ ಚಿತ್ರರಂಗದವರೆಲ್ಲರೂ ಬಾಹ್ಯಾಕಾಶಕ್ಕೆ ಹಾರಿ ಹೋಗಿದ್ದಾರಾ? ಅದಕ್ಕಾಗಿಯೇ ಅವರ ಚಪ್ಪಾಳೆ ನಮಗೆ ಕೇಳಿಸುತ್ತಿಲ್ಲವೇ? ಅಥವಾ ಇದೊಂದು ಕೇವಲ ಪ್ರೊಪಗಾಂಡ ಎಂದು ಭ್ರಮೆಯಲ್ಲಿದ್ದಾರಾ? ಅಥವಾ ಈ ಚಿತ್ರದ ಅದ್ಭುತ ಮೇಕಿಂಗ್ ನೋಡಿ ತಾವಿನ್ನು ಮುಂದೆ ಇಂತಹ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು ಪಾರ್ಶ್ವವಾಯು ಪೀಡಿತರಾಗಿದ್ದಾರಾ’ ಎಂದು ಆರ್.ಜಿ.ವಿ. ವ್ಯಂಗ್ಯವಾಡಿದ್ದಾರೆ.
Now that @AdityaDharFilms has EXPLODED a ATOMIC BOMB right under the film industry, what is shocking is the loud silence from the rest of the film industry .
I don’t know whether this is because the #Dhurandhar2 ‘s devastating explosion has hurled everyone else in the film…
— Ram Gopal Varma (@RGVzoomin) March 29, 2026
ಈ ಚಿತ್ರದ ಯಶಸ್ಸನ್ನು ಕಡೆಗಣಿಸುವುದು ಮೂರ್ಖತನ ಎಂದು ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ‘ನಿಮ್ಮ ಕಣ್ಣೆದುರೇ ಬೆಂಕಿ ಉಗುಳುತ್ತಿರುವ ಡೈನೋಸಾರ್‌ನಂತಹ ಈ ಸಿನಿಮಾವನ್ನು ಕಡೆಗಣಿಸಲು ಹೇಗೆ ಸಾಧ್ಯ? ಈ ಸಿನಿಮಾದ ಬಾಕ್ಸ್ ಆಫೀಸ್ ಸದ್ದು ನಿಮ್ಮ ಕಾಲ ಕೆಳಗಿನ ನೆಲವನ್ನೇ ನಡುಗಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಜಾತಿ, ಧರ್ಮ ಮುಖ್ಯವಲ್ಲ’; ರೆಹಮಾನ್ಗೆ ತಿರುಗೇಟು ಕೊಟ್ಟ ರಾಮ್ ಗೋಪಾಲ್ ವರ್ಮ
‘ನನ್ನ ಎಲ್ಲಾ ಸಿನಿಮಾ ಮಿತ್ರರಿಗೆ ಒಂದು ಸಲಹೆ. ಇದು ಸಿನಿಮಾ ಮೇಕಿಂಗ್‌ನ ಹೊಸ ಕೋರ್ಸ್ ಇದ್ದಂತೆ. ದಯವಿಟ್ಟು ಧುರಂಧರ್ 2 ಸಿನಿಮಾವನ್ನು ಗಂಭೀರವಾಗಿ ಅಧ್ಯಯನ ಮಾಡಿ. ಇಲ್ಲವಾದರೆ 2026ರ ಮಾರ್ಚ್ 19ರ ನಂತರದ ಸಿನಿಮಾದ ಸ್ಮಶಾನದಲ್ಲಿ ನೀವು ಹೂತುಹೋಗುತ್ತೀರಿ’ ಎಂದು ಖಡಕ್ ಆಗಿ ಹೇಳಿದ್ದಾರೆ. ಎಸ್.ಎಸ್. ರಾಜಮೌಳಿ, ಕರಣ್ ಜೋಹರ್, ಆಲಿಯಾ ಭಟ್ ಮುಂತಾದವರು ಈ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.