
‘ಧುರಂಧರ್ 2’ (Dhurandhar 2) ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ನಟಿ ಸಾರಾ ಅರ್ಜುನ್ ಅವರಿಗೆ ಖ್ಯಾತಿ ಹೆಚ್ಚಾಗಿದೆ. ಸಾರಾ ಅರ್ಜುನ್ ಅವರಿಗೆ ಕ್ರಿಕೆಟ್ ಬಗ್ಗೆಯೂ ಕ್ರೇಜ್ ಇದೆ. ಭಾನುವಾರ (ಮಾರ್ಚ್ 29) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಅವರು ಆಗಮಿಸಿದ್ದರು. ಆದರೆ, ಪಂದ್ಯ ಮುಗಿದು ಹೊರಬರುವಾಗ ಸಾರಾ ಅರ್ಜುನ್ (Sara Arjun) ಅವರು ಅಭಿಮಾನಿಗಳ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ.
20 ವರ್ಷ ವಯಸ್ಸಿನ ಸಾರಾ ಅರ್ಜುನ್ ಅವರು ಮುಂಬೈ ಇಂಡಿಯನ್ಸ್ ತಂಡದ ಜೆರ್ಸಿ ಧರಿಸಿ, ತಮ್ಮ ಪೋಷಕರಾದ ನಟ ರಾಜ್ ಅರ್ಜುನ್ ಮತ್ತು ತಾಯಿ ಸನ್ಯಾ ಅರ್ಜುನ್ ಅವರೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದರು. ಕ್ರೀಡಾಂಗಣದಲ್ಲಿ ಪಂದ್ಯವನ್ನು ಪೂರ್ಣವಾಗಿ ಆನಂದಿಸಿದ ನಂತರ ಅವರು ಹೊರಬರುತ್ತಿದ್ದಂತೆ ಅಭಿಮಾನಿಗಳ ಗುಂಪು ಅವರನ್ನು ಸುತ್ತುವರಿಯಿತು.
ಸದ್ಯ ‘ಧುರಂಧರ್ 2’ ಚಿತ್ರದ ಭರ್ಜರಿ ಯಶಸ್ಸಿನಿಂದಾಗಿ ಸಾರಾ ಅವರ ಜನಪ್ರಿಯತೆ ಎಲ್ಲ ಕಡೆಗಳಲ್ಲಿ ಹಬ್ಬಿದೆ. ಸ್ಟೇಡಿಯಂನಿಂದ ಹೊರಬರುತ್ತಿದ್ದ ಸಾರಾ ಅವರನ್ನು ಗುರುತಿಸಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಮಗಳ ರಕ್ಷಣೆಗೆ ನಿಂತ ತಂದೆ ರಾಜ್ ಅರ್ಜುನ್ ಅವರು ಸ್ವತಃ ಬಾಡಿಗಾರ್ಡ್‌ನಂತೆ ಕಾರ್ಯನಿರ್ವಹಿಸಿದರು.
ಅಭಿಮಾನಿಗಳ ಗುಂಪನ್ನು ಸರಿಸುತ್ತಾ, ಸಾರಾ ಅವರನ್ನು ಸುರಕ್ಷಿತವಾಗಿ ಕಾರಿನವರೆಗೆ ಕರೆದೊಯ್ದರು ರಾಜ್ ಅರ್ಜುನ್. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳ ಜೊತೆ ಮಾತಾಡಬೇಕು ಎಂಬ ಆಸೆ ಸಾರಾ ಅವರಿಗೆ ಇದ್ದಂತೆ ಕಾಣುತ್ತದೆ. ಆದರೆ ತಂದೆಯಾಗಿ ರಾಜ್ ಅರ್ಜುನ್ ಅವರು ಆ ಕ್ಷಣದಲ್ಲಿ ಜಾಗ್ರತೆ ವಹಿಸಿದ್ದು ಕೂಡ ನೆಟ್ಟಿಗರ ಮೆಚ್ಚುಗೆಗೆ ಕಾರಣ ಆಗಿದೆ.
ಇದನ್ನೂ ಓದಿ: ‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ
ವಾಂಖೆಡೆ ಸ್ಟೇಡಿಯಂ ಹೊರಗೆ ನಡೆದ ಈ ಗದ್ದಲದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಗಳನ್ನು ರಕ್ಷಿಸಲು ನಟ ರಾಜ್ ಅರ್ಜುನ್ ತೋರಿದ ಕಾಳಜಿಯನ್ನು ಕಂಡ ನೆಟ್ಟಿಗರು, ‘ತಂದೆ ಎಂದರೆ ಹೀಗಿರಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪಂದ್ಯ ಗೆದ್ದ ಸಂಭ್ರಮದ ನಡುವೆ ಸಾರಾ ಅವರ ಈ ವಿಡಿಯೋಗಳು ಕೂಡ ಗಮನ ಸೆಳೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.