ಇಸ್ಲಮಾಬಾದ್, ಫೆಬ್ರವರಿ 25: ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದ ಹಗರಣವೊಂದು ಬೆಳಕಿಗೆ ಬಂದಿದೆ. ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ತನ್ನ ನ್ಯಾಯಾಧೀಶರಲ್ಲಿ ಒಬ್ಬರಾದ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನು ವಜಾಗೊಳಿಸುವ ಕುರಿತು ವಿವರವಾದ 116 ಪುಟಗಳ ತೀರ್ಪನ್ನು ನೀಡಿದೆ. ಪಾಕಿಸ್ತಾನದ (Pakistan) ನ್ಯಾಯಾಧೀಶರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ (IHC) 5 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಅವರು ನಕಲಿ ಕಾನೂನು ಪದವಿ ಹೊಂದಿದ್ದಾರೆಂದು ಯಾರಿಗೂ ತಿಳಿಯದಂತೆ ತೀರ್ಪುಗಳನ್ನು ನೀಡಿದ್ದರು. ಅವರು ನಕಲಿ ಡಿಗ್ರಿ ಸರ್ಟಿಫಿಕೆಟ್ ಹೊಂದಿದ್ದಾರೆಂದು ಬಯಲಾಗಿದ್ದು ಹೇಗೆ ಗೊತ್ತಾ?
ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ 5 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿದ್ದರೂ ಅವರು ಕಾನೂನು ಪದವಿಯನ್ನು ಹೊಂದಿರಲಿಲ್ಲ. ಆದ್ದರಿಂದ, ಹೈಕೋರ್ಟ್ ನ್ಯಾಯಾಧೀಶರಾಗಿ ಅವರ ನೇಮಕಾತಿ ಕಾನೂನುಬದ್ಧವಾಗಿ ಅಮಾನ್ಯವಾಗಿದೆ. ಇಸ್ಲಮಾಬಾದ್ ಹೈಕೋರ್ಟ್ ಫೆಬ್ರವರಿ 23ರ ಸೋಮವಾರದಂದು ವಿವರವಾದ 116 ಪುಟಗಳ ತೀರ್ಪನ್ನು ನೀಡಿತು. ಹೈಕೋರ್ಟ್ ನ್ಯಾಯಾಧೀಶರಲ್ಲಿ ಒಬ್ಬರಾದ ಅವರನ್ನು ಜಡ್ಜ್ ಹುದ್ದೆಯಿಂದ ತೆಗೆದುಹಾಕಲಾಗಿದೆ. ಜಹಾಂಗಿರಿ ಅವರನ್ನು ಡಿಸೆಂಬರ್ 2020ರಲ್ಲಿ ಹೈಕೋರ್ಟ್‌ಗೆ ನೇಮಿಸಲಾಗಿತ್ತು. ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರಾಗಿ ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸುವುದನ್ನು ನಿಷೇಧಿಸಲಾಯಿತು.
ಇದನ್ನೂ ಓದಿ: ಭಾರತ-ಪಾಕಿಸ್ತಾನ ಯುದ್ಧ ನಾನು ನಿಲ್ಲಿಸದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಾಯ್ತಿದ್ರು ಎಂದ ಟ್ರಂಪ್
ತಾರಿಕ್ ಮೆಹಮೂದ್ ಜಹಾಂಗಿರಿ ಮೊದಲು 1988ರಲ್ಲಿ ನಕಲಿ ದಾಖಲಾತಿ ಸಂಖ್ಯೆಯ ಅಡಿಯಲ್ಲಿ ತಮ್ಮ ಎಲ್ಎಲ್.ಬಿ. ಭಾಗ-I ಪರೀಕ್ಷೆಗೆ ಹಾಜರಾಗಿದ್ದರು. ನಂತರ ಅವರು ಅನ್ಯಾಯದ ವಿಧಾನಗಳನ್ನು ಬಳಸಿ ಸಿಕ್ಕಿಬಿದ್ದರು ಮತ್ತು 1989ರಲ್ಲಿ ಹೊರಡಿಸಲಾದ ವಿಶ್ವವಿದ್ಯಾಲಯದ ಅನರ್ಹತೆಯ ಸುತ್ತೋಲೆಯ ಮೂಲಕ ಮೂರು ವರ್ಷಗಳ ಕಾಲ ನಿಷೇಧಿಸಲ್ಪಟ್ಟರು.
ಕರಾಚಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಒದಗಿಸಿದ ಮೂಲ ದಾಖಲೆಗಳನ್ನು ಆಧರಿಸಿ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ ಅವರ ಶೈಕ್ಷಣಿಕ ದಾಖಲೆಗಳು ನಕಲಿ ಎಂದು ನ್ಯಾಯಾಲಯ ಹೇಳಿದೆ. ಜಹಾಂಗಿರಿ 1988ರಲ್ಲಿ ನಕಲಿ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಅವರು ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಕಂಡುಬಂದಿತು. 1989ರಲ್ಲಿ ವಿಶ್ವವಿದ್ಯಾನಿಲಯವು ಅವರನ್ನು 3 ವರ್ಷಗಳ ಕಾಲ ನಿಷೇಧಿಸಿತ್ತು. ಅದಾದ ಮುಂದಿನ ವರ್ಷ, ಅವರು ಇಮ್ತಿಯಾಜ್ ಅಹ್ಮದ್ ಎಂಬ ಇನ್ನೊಬ್ಬ ವಿದ್ಯಾರ್ಥಿಗೆ ನಿಯೋಜಿಸಲಾದ ದಾಖಲಾತಿ ಸಂಖ್ಯೆಯನ್ನು ಬಳಸಿಕೊಂಡು ತಾರಿಕ್ ಜಹಾಂಗಿರಿ ಎಂಬ ಹೆಸರಿನಲ್ಲಿ ಮತ್ತೆ ಪರೀಕ್ಷೆಗೆ ಹಾಜರಾದರು.
ಇದನ್ನೂ ಓದಿ: ಪನ್ನೂನ್ ಹತ್ಯೆ ಸಂಚು ಪ್ರಕರಣ: ಅಮೆರಿಕ ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಭಾರತೀಯ ಪ್ರಜೆ ನಿಖಿಲ್ ಗುಪ್ತಾ!
ತೀರ್ಪಿನಲ್ಲಿ, ಜಹಾಂಗಿರಿ ಅವರಿಗೆ ಮೂಲ ದಾಖಲೆಗಳನ್ನು ಮತ್ತು ಲಿಖಿತ ಉತ್ತರವನ್ನು ನೀಡಲು ಹಲವು ಅವಕಾಶಗಳನ್ನು ನೀಡಿದ್ದರೂ ಅವರು ದಾಖಲೆ ನೀಡಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
