ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಶೂಟಿಂಗ್ ವೇಳೆ ತೀವ್ರ ಸ್ವರೂಪದ ಗಾಯಕ್ಕೆ ಒಳಗಾಗಿದ್ದಾರೆ. ಆ್ಯಕ್ಷನ್ ಹಾಗೂ ಡ್ಯಾನ್ಸ್ ಸನ್ನಿವೇಶಗಳ ಚಿತ್ರೀಕರಣದ ವೇಳೆ ಅವರ ಸೊಂಟದ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ವೈದ್ಯರು ಬರೋಬ್ಬರಿ 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಗಾಯದ (Injury) ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿದೆ. ರಶ್ಮಿಕಾ ಮಂದಣ್ಣ ಅವರ ಹೆಲ್ತ್ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಕ್ರೀಡಾಪಟುಗಳಿಗೆ ಆಗುವಂತಹ ಗಂಭೀರ ಗಾಯ:
ರಶ್ಮಿಕಾ ಮಂದಣ್ಣ ಪ್ರಸ್ತುತ ‘ರಣಬಾಲಿ’ ಹಾಗೂ ‘ಮೈಸಾ’ ಸಿನಿಮಾಗಳ ಶೂಟಿಂಗ್‌ನಲ್ಲಿ ಸಕ್ರಿಯರಾಗಿದ್ದರು. ಈ ಚಿತ್ರಗಳ ಕಠಿಣ ಆ್ಯಕ್ಷನ್ ಸನ್ನಿವೇಶಗಳು ಮತ್ತು ಡ್ಯಾನ್ಸ್ ಸೀನ್‌ಗಳಿಗಾಗಿ ಸತತವಾಗಿ ಶ್ರಮಿಸುತ್ತಿದ್ದ ವೇಳೆ ಅವರಿಗೆ ಈ ಗಾಯ ಆಗಿದೆ. ಇದರಿಂದಾಗಿ ಅವರು ಚಿತ್ರೀಕರಣಕ್ಕೆ ಹಾಗೂ ಇತರೆ ಕೆಲಸಗಳಿಗೆ ಬ್ರೇಕ್ ನೀಡಬೇಕಿದೆ. ಗುಣಮುಖರಾದ ಬಳಿಕವೇ ಶೂಟಿಂಗ್ ಮುಂದುವರಿಸಬೇಕಿದೆ.
ರಶ್ಮಿಕಾಗೆ ಆರು ವಾರ ಬೆಡ್ ರೆಸ್ಟ್:
ವೈದ್ಯರ ಪ್ರಕಾರ, ರಶ್ಮಿಕಾ ಅವರ ಸೊಂಟದ ಭಾಗದಲ್ಲಿ ಟೆಂಡನ್ ಡಿಟ್ಯಾಚ್ ಆಗಿದೆ. ಸಾಮಾನ್ಯವಾಗಿ ಭಾರಿ ಪ್ರಮಾಣದ ಕಠಿಣ ಶಾರೀರಿಕ ಶ್ರಮ ವಹಿಸುವ ವೃತ್ತಿಪರ ಕ್ರೀಡಾಪಟುಗಳಲ್ಲಿ ಇಂತಹ ಗಾಯಗಳು ಕಂಡುಬರುತ್ತವೆ. ಗಾಯದ ತೀವ್ರತೆಯನ್ನು ಪರಿಶೀಲಿಸಿದ ವೈದ್ಯಕೀಯ ತಂಡ, ಅವರಿಗೆ ಕನಿಷ್ಠ 6 ವಾರಗಳ ಕಾಲ ಯಾವುದೇ ಕೆಲಸ ಮಾಡದೇ ಸಂಪೂರ್ಣ ಬೆಡ್ ರೆಸ್ಟ್ ಪಡೆಯಲು ಸಲಹೆ ನೀಡಿದೆ.
ಸ್ಥಗಿತಗೊಳ್ಳಲಿವೆ ಶೂಟಿಂಗ್ ಶೆಡ್ಯೂಲ್‌ಗಳು:
ರಶ್ಮಿಕಾ ಅವರ ಕೈಯಲ್ಲಿ ಪ್ರಸ್ತುತ ಹಲವು ದೊಡ್ಡ ಬಜೆಟ್ ಸಿನಿಮಾಗಳಿವೆ. ಆದರೆ ಈಗ ದಿಢೀರ್ ಗಾಯಗೊಂಡಿರುವ ಕಾರಣ ಅವರು ಕೆಲ ಕಾಲ ಶೂಟಿಂಗ್‌ನಿಂದ ದೂರ ಉಳಿಯಬೇಕಾಗಿದೆ. ಇದರಿಂದಾಗಿ ಅವರು ನಟಿಸುತ್ತಿರುವ ಸಿನಿಮಾಗಳ ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಭಾರಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಒಟ್ಟಾರೆ ರಶ್ಮಿಕಾ ಅವರಿಗೆ ಗಾಯ ಆಗಿದೆ ಎಂಬ ಸುದ್ದಿ ತಿಳಿದು ಅಭಿಮಾನಿಗಳಿಗೆ ಆತಂಕ ಆಗಿದೆ.
ಇದನ್ನೂ ಓದಿ: ‘ಮೈಸಾ’ ಚಿತ್ರಕ್ಕಾಗಿ ನೀರಿನಾಳದೊಳಗೆ ಇಳಿದು ಫೈಟ್ ಮಾಡಿದ ರಶ್ಮಿಕಾ ಮಂದಣ್ಣ
ಮದುವೆ ಬಳಿಕವೂ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರಿಗೆ ಗಾಯ ಆಗಿರುವುದರಿಂದ ಬ್ರೇಕ್ ತೆಗೆದುಕೊಳ್ಳುವುದು ಅನಿವಾರ್ಯ ಆಗಿದೆ. ಆದರೆ ಸೂಕ್ತ ಚಿಕಿತ್ಸೆ ಮತ್ತು ವಿಶ್ರಾಂತಿಯ ನಂತರ ಅವರು ಬೇಗನೆ ಗುಣಮುಖರಾಗಿ ಮತ್ತೆ ಕ್ಯಾಮೆರಾ ಎದುರಿಸಲಿದ್ದಾರೆ ಎಂಬ ಭರವಸೆ ಅಭಿಮಾನಿಗಳಿಗೆ ಇದೆ. ಅವರ ಆರೋಗ್ಯದ ಬಗ್ಗೆ ಇನ್ನಷ್ಟೇ ಅಪ್ಡೇಟ್ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
