ಬಾಲಿವುಡ್‌ನ ಖ್ಯಾತ ನಟ ಪಂಕಜ್ ತ್ರಿಪಾಠಿ ಅವರ ಅಣ್ಣ ಬಿಜೇಂದ್ರ ನಾಥ್ ತಿವಾರಿ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಗಲು ಹೊತ್ತಿನಲ್ಲೇ ಹರಿತವಾದ ಆಯುಧದಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ಆಘಾತಕಾರಿ ಘಟನೆ ಬಿಹಾರದ ಮಾಧೋಪುರದ ಬೆಲ್ಸಂದ್ ಗ್ರಾಮದಲ್ಲಿ ನಡೆದಿದ್ದು, ಸದ್ಯ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಬಿಜೇಂದ್ರ ನಾಥ್ ತಿವಾರಿ ಅವರ ಮೇಲೆ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ಹಲ್ಲೆಯ ತಕ್ಷಣವೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪ್ರಾಥಮಿಕ ಚಿಕಿತ್ಸೆಯ ನಂತರ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ, ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಅವರನ್ನು ಪಾಟ್ನಾದ ದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ಘಟನೆಯಿಂದ ಪಂಕಜ್ ತ್ರಿಪಾಠಿ ಅವರ ಕುಟುಂಬದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಮಾಧೋಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ಪ್ರಮುಖ ಆರೋಪಿಯನ್ನು ಗುರುತಿಸಲಾಗಿದ್ದು, ಆತನನ್ನು ಬಂಧಿಸಲು ವಿವಿಧೆಡೆ ಅನ್ವೇಷಣೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಯನ್ನು ಕಂಬಿ ಹಿಂದೆ ತಳ್ಳಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ‘ನಿನಗೆ ಸರಿಯಾಗಿ ಏಟು ಬೀಳುತ್ತೆ’; ಪಂಕಜ್ ತ್ರಿಪಾಠಿಗೆ ನಾನಾ ಪಾಟೇಕರ್ ಬೆದರಿಕೆವೊಡ್ಡಿದ್ದೇಕೆ?
ಪಂಕಜ್ ತ್ರಿಪಾಠಿ ಇಂದು ಚಿತ್ರರಂಗದ ದೊಡ್ಡ ಸ್ಟಾರ್ ಆಗಿದ್ದರೂ, ಅವರ ಕುಟುಂಬಸ್ಥರು ಹಳ್ಳಿಯಲ್ಲಿ ಅತ್ಯಂತ ಸರಳವಾಗಿ, ಪ್ರಚಾರದಿಂದ ದೂರ ಉಳಿದಿದ್ದರು. ಆದರೂ ಅವರ ಮೇಲೆ ದಾಳಿ ನಡೆದಿದ್ದು ಅನೇಕರಿಗೆ ಅಚ್ಚರಿ ತಂದಿದೆ. ಪೊಲೀಸರು ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮಗಳಿಂದಲೂ ಸಮಗ್ರ ತನಿಖೆ ಮುಂದುವರಿಸಿದ್ದಾರೆ. ಪಂಕಜ್ ಅವರು ಸಿನಿಮಾ ಹಾಗೂ ವೆಬ್ ಸೀರಿಸ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
