ಚಿಕ್ಕಮಗಳೂರು, ಫೆಬ್ರವರಿ 13: ಮೃತರ ಕುಟುಂಬಕ್ಕೆ ಪರಿಹಾರ ನೀಡದ ಕಾರಣ ಕೋರ್ಟ್ ಸಿಬ್ಬಂದಿ ನಡು ರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. 2023ರಲ್ಲಿ ನಡೆದ ಅಪಘಾತದಲ್ಲಿ ಬಸ್ ಡಿಕ್ಕಿಯಾಗಿ ರೇಣುಕಪ್ಪ ಹಾಗೂ ರವಿಕಿರಣ್ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 32 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕೆಎಸ್‌ಆರ್‌ಟಿಸಿಗೆ ಸೇರಿದ, ಚಿಕ್ಕಮಗಳೂರು ಡಿಪೋ ವ್ಯಾಪ್ತಿಯ ಯಾವುದೇ ಬಸ್ ಅನ್ನು ಜಪ್ತಿ ಮಾಡುವಂತೆ ಕೋರ್ಟ್ ಸೂಚನೆ ನೀಡಿತ್ತು. ಇದರಂತೆ ಬೆಂಗಳೂರು ಕಡೆಗೆ ತೆರಳುತ್ತಿದ್ದ KA 18 F1040 ಸಂಖ್ಯೆಯ ಬಸ್‌ನ್ನು ಕೋರ್ಟ್ ಸಿಬ್ಬಂದಿ ಮಧ್ಯರಸ್ತೆಯಲ್ಲೇ ಜಪ್ತಿ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ನಡು ರಸ್ತೆಯಲ್ಲಿ ಬಸ್ ಜಪ್ತಿ ಮಾಡಿದ ಕ್ರಮಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
