ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ (Amitabh Bachchan) ಸರ್ಜರಿ ಆಗಿದೆ ಮತ್ತು ಐಸಿಯುಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಭಾರೀ ಆತಂಕ ಮೂಡಿಸಿತ್ತು. ಆದರೆ ಈಗ ಸ್ವತಃ ಬಿಗ್ ಬಿ ಅವರೇ ಈ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಬ್ಲಾಗ್ ಪೋಸ್ಟ್ ಅನ್ನು ಜನರು ತಪ್ಪು ತಿಳಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದರಿಂದ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಅರ್ಜೆಂಟೀನಾ ಸೋಲಿನ ಬಗ್ಗೆ ಬರೆದಿದ್ದ ಬಿಗ್ ಬಿ
ಅಮಿತಾಭ್ ಬಚ್ಚನ್ ಅವರಿಗೆ ಈಗ 83 ವರ್ಷ ವಯಸ್ಸು. ಅವರು ತಾವು ಸಂಪೂರ್ಣವಾಗಿ ಆರಾಮಾಗಿ ಇರುವುದಾಗಿ ತಿಳಿಸಿದ್ದಾರೆ. ಫಿಫಾ ವಿಶ್ವಕಪ್ ಫೈನಲ್ನಲ್ಲಿ ಸ್ಪೇನ್ ವಿರುದ್ಧ ಅರ್ಜೆಂಟೀನಾ ಸೋತಿದ್ದರ ಬಗ್ಗೆ ಅವರು ಬ್ಲಾಗ್ನಲ್ಲಿ ಬರೆದಿದ್ದರು. ಚಾಂಪಿಯನ್ ಮೆಸ್ಸಿ ಸೋತಾಗ ಆಗುವ ಮಾನಸಿಕ ಸ್ಥಿತಿಯನ್ನು ವಿವರಿಸಲು ಅವರು ಆಸ್ಪತ್ರೆಯ ಉದಾಹರಣೆ ನೀಡಿದ್ದರು. ಆದರೆ ಜನರು ಅದನ್ನು ತಮಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೊಂದಲ ಮೂಡಿಸಿದ ಬ್ಲಾಗ್ ಪೋಸ್ಟ್
ಬಿಗ್ ಬಿ ತಮ್ಮ ಬ್ಲಾಗ್ನಲ್ಲಿ ‘ಆಸ್ಪತ್ರೆ, ಸರ್ಜರಿ ಮತ್ತು ಐಸಿಯು ಮುಗಿಸಿ ಮನೆಗೆ ಮರಳುವ ಸಮಯ ಅತ್ಯಂತ ಕಷ್ಟಕರ ಹಂತ’ ಎಂದು ಬರೆದುಕೊಂಡಿದ್ದರು. ’ನೀವು ದೊಡ್ಡ ಚಾಂಪಿಯನ್ ಆಗಿದ್ದಾಗ ಒಂದು ದಿನ ಸೋಲು ಎದುರಾಗುತ್ತದೆ. ಅದು ಜೀವನದ ಕಠಿಣ ಹಂತ’ ಎಂದೂ ಉಲ್ಲೇಖಿಸಿದ್ದರು. ಈ ಸಾಲುಗಳನ್ನು ನೋಡಿ ಅಭಿಮಾನಿಗಳು ಅಮಿತಾಭ್ ಅವರ ಆರೋಗ್ಯ ಕೈಕೊಟ್ಟಿದೆ ಎಂದು ಗಾಬರಿಯಾಗಿದ್ದರು.
ಇದನ್ನೂ ಓದಿ: 83ನೇ ವಯಸ್ಸಲ್ಲಿ ಅಮಿತಾಭ್ ಬಚ್ಚನ್ಗೆ ಸರ್ಜರಿ? ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಪೋಸ್ಟ್
ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ
ತಮ್ಮ ಆರೋಗ್ಯದ ವದಂತಿಗಳಿಗೆ ಪೂರ್ಣ ವಿರಾಮ ಇಟ್ಟಿರುವ ಬಿಗ್ ಬಿ ಸದ್ಯ ತಮ್ಮ ಶೂಟಿಂಗ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಶೀಘ್ರದಲ್ಲೇ ‘ಕೌನ್ ಬನೇಗಾ ಕರೋಡ್ಪತಿ’ ಸೀಸನ್ 18 ರ ಹೋಸ್ಟಿಂಗ್ ಆರಂಭಿಸಲಿದ್ದಾರೆ. ಇದರೊಂದಿಗೆ ಸೂಪರ್ ಹಿಟ್ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ನಲ್ಲಿ ಅಶ್ವತ್ಥಾಮ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ‘ಸೆಕ್ಷನ್ 84’ ಮತ್ತು ‘ಸರ್ಕಾರ್ 4’ ಚಿತ್ರಗಳ ಕೆಲಸಗಳೂ ನಡೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.