ಜೈಸಲ್ಮೇರ್,ಜುಲೈ 23: ದೇಶಾದ್ಯಂತ ಪರೀಕ್ಷಾ ಅಕ್ರಮಗಳ ಸರಣಿ ವಿವಾದ ನಡೆಯುತ್ತಿರುವ ಬೆನ್ನಲ್ಲೇ, ರಾಜಸ್ಥಾನದ ಜೈಸಲ್ಮೇರ್ನಲ್ಲಿ ಪರೀಕ್ಷಾ(Exam) ಅಕ್ರಮದ ಘಟನೆಯೊಂದು ಬೆಳಕಿಗೆ ಬಂದಿದೆ. ಬಿಎ (BA) ದ್ವಿತೀಯ ವರ್ಷದ ಪರೀಕ್ಷೆ ನಡೆಯುತ್ತಿದ್ದಾಗ, ಪರೀಕ್ಷಾ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಜೋರಾಗಿ ಹೇಳಿಕೊಡುತ್ತಿದ್ದುದನ್ನು ವಿಶ್ವವಿದ್ಯಾಲಯದ ಫ್ಲೈಯಿಂಗ್ ಸ್ಕ್ವಾಡ್ ರೆಡ್ಹ್ಯಾಂಡ್ ಆಗಿ ಹಿಡಿದಿದೆ. ಘಟನೆಗೆ ಸಂಬಂಧಿಸಿದಂತೆ ಜೋಧ್ಪುರದ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯ ಅಧಿಕಾರಿಗಳು ಪರೀಕ್ಷಾ ಹಾಲ್ನಲ್ಲಿದ್ದ ಎಲ್ಲಾ 93 ಉತ್ತರ ಪತ್ರಿಕೆಗಳನ್ನು ಸೀಲ್ ಮಾಡಿದ್ದು, ‘ಸಾಮೂಹಿಕ ನಕಲು’ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರೀಕ್ಷಾ ಹಾಲ್ನಲ್ಲಿ ನಡೆದಿದ್ದೇನು?
ಜೈಸಲ್ಮೇರ್ನ ಕಜೋಯ್ ಗ್ರಾಮದಲ್ಲಿರುವ ‘ಶ್ರೀ ಕರ್ಣಿ ಕಾಲೇಜಿ’ನಲ್ಲಿ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಬಿಎ ದ್ವಿತೀಯ ವರ್ಷದ ‘ಹಿಂದಿ ಸಾಹಿತ್ಯ’ ಪರೀಕ್ಷೆ ನಡೆಯುತ್ತಿತ್ತು. ಪ್ರೊ. ಅಮನ್ ಸಿಂಗ್ ನೇತೃತ್ವದ ಜೆಎನ್ವಿಯು ಫ್ಲೈಯಿಂಗ್ ಸ್ಕ್ವಾಡ್ ಪರೀಕ್ಷಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿತು. ಜೈ ಕರಣ್ ಮತ್ತು ಓಂ ಪ್ರಕಾಶ್ ಎಂಬ ಇಬ್ಬರು ಮೇಲ್ವಿಚಾರಕರು ಪರೀಕ್ಷಾ ಹಾಲ್ನಲ್ಲಿ ನಿಂತು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಜೋರಾಗಿ ಓದಿ ಹೇಳಿಕೊಡುತ್ತಿದ್ದುದ್ದು ಕಂಡುಬಂತು.
ಫ್ಲೈಯಿಂಗ್ ಸ್ಕ್ವಾಡ್ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದಾಗ ಬಹುತೇಕ ಎಲ್ಲಾ ವಿದ್ಯಾರ್ಥಿಗಳ ಉತ್ತರಗಳು ಅಕ್ಷರಶಃ ಒಂದೇ ರೀತಿ ಇರುವುದು ದೃಢಪಟ್ಟಿತು. ಘಟನೆ ನಡೆದ ಕೂಡಲೇ ಕಾಲೇಜಿನ ಸಿಸಿಟಿವಿ (CCTV)ಯನ್ನು ಪರೀಕ್ಷಿಸಲಾಗಿತ್ತು ಮೇಲ್ವಿಚಾರಕರು ಅಭ್ಯರ್ಥಿಗಳಿಗೆ ಉತ್ತರ ಡಿಕ್ಟೇಟ್ ಮಾಡುತ್ತಿರುವುದು ಸಿಸಿಟಿವಿ ಕೆಮೆರಾದಲ್ಲೂ ಸ್ಪಷ್ಟವಾಗಿ ಸೆರೆಯಾಗಿದೆ.
ಹೊಸ ಉತ್ತರ ಪತ್ರಿಕೆ ವಿತರಣೆ: ತಕ್ಷಣವೇ 93 ಉತ್ತರ ಪತ್ರಿಕೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಹೊಸ ಉತ್ತರ ಪತ್ರಿಕೆಗಳನ್ನು ನೀಡಿ ಪರೀಕ್ಷೆ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.
ಮತ್ತಷ್ಟು ಓದಿ: ‘ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್ನಲ್ಲಿ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧ’; ಜೆ.ಪಿ ನಡ್ಡಾ ಭರವಸೆ
ವಿದ್ಯಾರ್ಥಿಗಳಿಗೆ 3 ವರ್ಷ ನಿಷೇಧ ಭೀತಿ: ಅಕ್ರಮ ಎಸಗಿದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ 1 ರಿಂದ 3 ವರ್ಷಗಳ ಕಾಲ ಯಾವುದೇ ಪರೀಕ್ಷೆ ಬರೆಯದಂತೆ ನಿಷೇಧ ಹೇರುವ ಸಾಧ್ಯತೆಯಿದೆ ಎಂದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಶ್ಯಾಮ್ ಸುಂದರ್ ಮೀನಾ ತಿಳಿಸಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಶಿಕ್ಷಕರು ಹಾಗೂ ಕಾಲೇಜು ಮಂಡಳಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪವನ್ ಕುಮಾರ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ವಿಡಿಯೋ
Rajasthan News –
Invigilators dictate answers during university exam in Jaisalmer college; probe ordered.
The matter came to light when a flying squad of Jai Narain Vyas University conducted a surprise inspection at Shri Karni College in Kajoi village during the BA second-year… pic.twitter.com/xJf2A5rTx6
— News Arena India (@NewsArenaIndia) July 23, 2026
ಜೈಸಲ್ಮೇರ್ ಮತ್ತು ನೆರೆಯ ಬಾರ್ಮರ್ ಜಿಲ್ಲೆಯಾದ್ಯಂತ ಫ್ಲೈಯಿಂಗ್ ಸ್ಕ್ವಾಡ್ ಸರಣಿ ತಪಾಸಣೆ ನಡೆಸಿದ್ದು, ಶಿವ್ ಎಂಬಲ್ಲಿನ ಮತ್ತೊಂದು ಪರೀಕ್ಷಾ ಕೇಂದ್ರದಲ್ಲೂ ವಂಚನೆ ಪ್ರಕರಣ ವರದಿಯಾಗಿದೆ. ರಾಜಸ್ಥಾನದಲ್ಲಿ ಸರಣಿ ಪೇಪರ್ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ‘ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯಿದೆ’ಯಡಿ ಕಠಿಣ ಶಿಕ್ಷೆ ಮತ್ತು ಜೈಲು ಶಿಕ್ಷೆಯ ನಿಯಮಗಳನ್ನು ಜಾರಿಗೆ ತಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ