ಕನ್ನಡದ ಜನಪ್ರಿಯ ನಟ ದಿಗಂತ್ (Diganth), ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರಿಗೆ ದೊಡ್ಡ ಯಶಸ್ಸು ದೊರೆತಿಲ್ಲ. ಕೆಲ ದಿನಗಳ ಹಿಂದಷ್ಟೆ ಅವರದ್ದೇ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಬಾಡಿಗೆ ಹಣದಿಂದ ಜೀವನ ನಿರ್ವಹಣೆ ಮಾಡುವಂತಾಗಿದೆ ಎಂದು ಹೇಳಿದ್ದರು. ಕನ್ನಡದಲ್ಲಿ ಅವಕಾಶಗಳು ಕಡಿಮೆ, ಪ್ರೇಕ್ಷಕರು ಸಿನಿಮಾ ನೋಡುತ್ತಿಲ್ಲ ಎಂಬ ನೋವನ್ನು ದಿಗಂತ್ ಅಂದು ತೋಡಿಕೊಂಡಿದ್ದರು. ಇದೀಗ ನಟ ದಿಗಂತ್ ಪರ ಭಾಷೆ ಸಿನಿಮಾ ಒಂದರಲ್ಲಿ ನಟಿಸಿದ್ದು, ಅಲ್ಲಿಯೇ ಮತ್ತೊಂದು ಸಿನಿಮಾ ಅವಕಾಶ ಕೊಡಿ ಎಂದು ಬಹಿರಂಗವಾಗಿ ಕೇಳಿದ್ದಾರೆ.
ದಿಗಂತ್ ಅವರು ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಜೂನ್ 19ಕ್ಕೆ ಬಿಡುಗಡೆ ಆಗಲಿದೆ. ನಿನ್ನೆಯಷ್ಟೆ (ಜೂನ್ 17) ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ದಿಗಂತ್ ಸಹ ಭಾಗಿ ಆಗಿದ್ದರು. ಈ ವೇಳೆ ಅವರು ತೆಲುಗು ಚಿತ್ರರಂಗದಲ್ಲಿ ಮತ್ತೆ ಅವಕಾಶ ನೀಡುವಂತೆ ಕೇಳಿಕೊಂಡರು.
‘ನಾನು ಬೆಂಗಳೂರಿನವನು, ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀನಿ. ನನಗೆ ಈ ಸಿನಿಮಾನಲ್ಲಿ ನಟಿಸಲು ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ. ವಿಶೇಷವಾಗಿ ನಿರ್ದೇಶಕಿ ನಂದಿನಿ ರೆಡ್ಡಿ ಹಾಗೂ ಸಮಂತಾ ಋತ್ ಪ್ರಭು ಅವರಿಗೆ ಧನ್ಯವಾದ. ನಾನು ಸಮಂತಾ ಅವರ ನಟನೆಯನ್ನು ಅವರು ಮಾಡುವ ಕೆಲಸವನ್ನು ನೋಡುತ್ತಾ ಪ್ರಶಂಸಿಸುತ್ತಾ ಬಂದವನು. ನಂದಿನಿ ಮತ್ತು ಸಮಂತಾರ ‘ಓಹ್ ಬೇಬಿ’ ನನಗೆ ಬಹಳ ಇಷ್ಟ ಎಂದ ದಿಗಂತ್, ‘ಮಾ ಇಂಟಿ ಬಂಗಾರಂ’ ಸಿನಿಮಾಕ್ಕೆ ಕೆಲಸ ಮಾಡಿದ ಪ್ರಮುಖ ತಂತ್ರಜ್ಞರು ನಿರ್ಮಾಪಕರು, ಎಕ್ಸಿಕ್ಯೂಟಿವ್ ನಿರ್ಮಾಪಕರುಗಳ ಹೆಸರು ಹೇಳಿ ಎಲ್ಲರಿಗೂ ಧನ್ಯವಾದ ಹೇಳಿದರು.
ಇದನ್ನೂ ಓದಿ:ಐಂದ್ರಿತಾ-ದಿಗಂತ್ ಪ್ಲ್ಯಾನ್ ಅಂತು ಸೆಟ್ ಆಗಿದೆ, ಏನದು ಪ್ಲ್ಯಾನ್ ನೋಡಿ
ಬಳಿಕ ಭಾಷಣ ಮುಗಿಸುವಾಗ, ‘ನನಗೆ ಮತ್ತೆ ಅವಕಾಶ ನೀಡುತ್ತೀರ ತಾನೇ?’ ಎಂದು ಪ್ರಶ್ನಿಸಿದರು. ಹಲವರು ಇದಕ್ಕೆ ಹೌದು ಎಂದರು. ಬಳಿಕ ದಿಗಂತ್, ‘ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲು ಇನ್ನೊಂದು ಅವಕಾಶ ಕೊಡಿ’ ಎಂದು ವೇದಿಕೆ ಮೇಲಿಂದ ಕೇಳಿ ಭಾಷಣ ಮುಗಿಸಿದರು.
ಅಸಲಿಗೆ ಬಹಳ ವರ್ಷಗಳ ಹಿಂದೆಯೇ ದಿಗಂತ್ ಅವರು ತೆಲುಗು ಸಿನಿಮಾ ಒಂದರಲ್ಲಿ ನಟಿಸಬೇಕಿತ್ತು. ವಿಜಯ್ ದೇವರಕೊಂಡ ಜೊತೆಗೆ ದಿಗಂತ್ ಬೈಕರ್ಗಳ ಬಗೆಗಿನ ಕತೆಯುಳ್ಳ ಸಿನಿಮಾ ಮಾಡಬೇಕಿತ್ತು. ಸಿನಿಮಾಕ್ಕಾಗಿ ತರಬೇತಿ ಸಹ ವಿಜಯ್ ದೇವರಕೊಂಡ ಜೊತೆ ಸೇರಿ ದಿಗಂತ್ ಮಾಡಿದ್ದರು ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೂಲಕ ತೆಲುಗಿಗೆ ಹೋಗಿದ್ದಾರೆ. ಅವರ ಕೇಳಿ ಕೊಂಡಂತೆ ತೆಲುಗು ಸಿನಿಮಾ ಅವಕಾಶಗಳು ಸಿಗುತ್ತವೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ