2026 ರ ಟಿ20 ವಿಶ್ವಕಪ್‌ನ (T20 World Cup 2026) ಒಂದು ಸುತ್ತು ಮುಗಿದಿದ್ದು, ಈಗ ಎರಡನೇ ಸುತ್ತು ಇಂದಿನಿಂದ ಆರಂಭವಾಗಿದೆ. ಟೀಂ ಇಂಡಿಯಾ ಮೊದಲ ಸುತ್ತಿನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಸುತ್ತಿನಲ್ಲಿ ತನ್ನ ಮೊದಲ ಪಂದ್ಯವನ್ನು ಕಳೆದ ವಿಶ್ವಕಪ್ ರನ್ನರ್ ಅಪ್ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡಕ್ಕೆ ಅಭಿಷೇಕ್ (Abhishek Sharma) ಅವರ ಹ್ಯಾಟ್ರಿಕ್ ಸೊನ್ನೆ ಪ್ರದರ್ಶನ ದೊಡ್ಡ ತಲೆನೋವಾಗಿದೆ. ಈ ಪಂದ್ಯಾವಳಿಯಲ್ಲಿ ಆಡಿರುವ ಸತತ ಮೂರು ಪಂದ್ಯಗಳಲ್ಲಿಯೂ ಅಭಿಷೇಕ್ 0 ರನ್ ಗಳಿಸಿ ಔಟಾಗಿದ್ದಾರೆ. ಹೀಗಾಗಿ ಸೂಪರ್ 8 ಸುತ್ತು ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಸೂರ್ಯಕುಮಾರ್ (Suryakumar Yadav) ಬಳಿ, ಅಭಿಷೇಕ್ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸೂರ್ಯ, ವಿಭಿನ್ನ ಉತ್ತರ ನೀಡುವ ಮೂಲಕ ಟೀಕಕಾರರ ಬಾಯಿ ಮುಚ್ಚಿಸಿದರು.
ವಾಸ್ತವವಾಗಿ ಈ ವಿಶ್ವಕಪ್‌ನಲ್ಲಿ ಅಭಿಷೇಕ್ ಅವರನ್ನು ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ಅತಿದೊಡ್ಡ ಶಕ್ತಿ ಎಂದು ಪರಿಗಣಿಸಲಾಗಿತ್ತು. ಕಳೆದೊಂದು ವರ್ಷದಿಂದ ಅಭಿಷೇಕ್ ಕೂಡ ಇದನ್ನು ಸಾಭೀತುಪಡಿಸಿಕೊಂಡು ಬಂದಿದ್ದರು. ಆದರೆ ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ಗೆ ಉತ್ತಮ ಪ್ರದರ್ಶನ ನೀಡುವುದಿರಲಿ, ಖಾತೆಯನ್ನೂ ತೆರೆಯಲು ಆಗಿಲ್ಲ. ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆಯೇ ಔಟಾದ ನಂತರ, ಅಭಿ ಅವರ ಆರೋಗ್ಯ ಹದಗೆಟ್ಟಿತು. ಇದರಿಂದಾಗಿ ಎರಡು ದಿನಗಳ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆದಾಗ್ಯೂ, ಅವರು ಆಟಕ್ಕೆ ಮರಳಿದರೂ ಅವರ ಅದೃಷ್ಟ ಬದಲಾಗಲಿಲ್ಲ ಮತ್ತು ಮುಂದಿನ ಎರಡು ಪಂದ್ಯಗಳಲ್ಲಿ ಅಭಿ ಸೊನ್ನೆ ಸುತ್ತಿದರು.
ಅಭಿಷೇಕ್ ಬೆನ್ನಿಗೆ ನಿಂತ ಸೂರ್ಯ
ಪರಿಣಾಮವಾಗಿ, ಸೂಪರ್ 8 ಸುತ್ತು ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಾಯಕ ಸೂರ್ಯ, ‘ಅಭಿಷೇಕ್ ಶರ್ಮಾ ಅವರ ಫಾರ್ಮ್ ಬಗ್ಗೆ ಚಿಂತಿಸುತ್ತಿರುವವರ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಅಭಿಷೇಕ್ ಅವರನ್ನು ಎದುರಿಸುವ ತಂಡಗಳ ಬಗ್ಗೆ ನಾನು ಹೆಚ್ಚು ಚಿಂತಿತನಾಗಿದ್ದೇನೆ. ಅವರು ಕಳೆದ ವರ್ಷ ತಂಡಕ್ಕೆ ಎಲ್ಲವನ್ನೂ ಮಾಡಿದರು, ಆದ್ದರಿಂದ ಈಗ ಅಭಿ ಅವರ ಬೆನ್ನಿಗೆ ನಿಲ್ಲುವ ಸರದಿ ನಮ್ಮದು’ ಎಂದು ಹೇಳಿದರು.
IND vs NED: ಸತತ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಅಭಿಷೇಕ್ ಶರ್ಮಾ
ಒಂದೇ ತಿಂಗಳಲ್ಲಿ 5 ಬಾರಿ ಸೊನ್ನೆಗೆ ಔಟ್
ಈ ವಿಶ್ವಕಪ್‌ನಲ್ಲಿ ಇಂತಹ ಆರಂಭವನ್ನು ಟೀಂ ಇಂಡಿಯಾ ಮತ್ತು ಅಭಿಷೇಕ್ ಸ್ವತಃ ಊಹಿಸಲೂ ಸಾಧ್ಯವಿಲ್ಲ. ಈ ವಿಶ್ವಕಪ್ ಮಾತ್ರವಲ್ಲ, ಅಭಿಷೇಕ್ ಅವರ 2026 ರ ಪ್ರದರ್ಶನವು ಇಲ್ಲಿಯವರೆಗೆ ಆಶಾದಾಯಕವಾಗಿಲ್ಲ. ಕೇವಲ ಒಂದು ತಿಂಗಳಲ್ಲಿ, ಅವರು ಎಂಟು ಟಿ20 ಪಂದ್ಯಗಳನ್ನಾಡಿದ್ದು, ಐದರಲ್ಲಿ ತಮ್ಮ ಖಾತೆಯನ್ನು ತೆರೆಯಲು ವಿಫಲರಾಗಿದ್ದಾರೆ. ಇದರ ಹೊರತಾಗಿಯೂ, ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದಿದೆ, ಆದರೆ ಸೂಪರ್ 8 ಸುತ್ತಿನಲ್ಲಿ ಸ್ಪರ್ಧೆಯು ಮೊದಲಿಗಿಂತ ಕಠಿಣವಾಗಿರುತ್ತದೆ. ಆದ್ದರಿಂದ, ಅಭಿಷೇಕ್ ದಕ್ಷಿಣ ಆಫ್ರಿಕಾ ವಿರುದ್ಧ ಬಲವಾದ ಅಥವಾ ಪ್ರಭಾವಶಾಲಿ ಇನ್ನಿಂಗ್ಸ್ ನೀಡದಿದ್ದರೆ, ತಂಡಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
