ಮಕ್ಕಳು (Children) ಬೆಳೆದಂತೆ ಅವರ ದೇಹ ಮತ್ತು ಮನಸ್ಸಿನಲ್ಲಿ ಸಹಜವಾಗಿ ಹಲವು ಬದಲಾವಣೆಗಳು ಆರಂಭವಾಗುತ್ತವೆ. ಈ ಸಮಯದಲ್ಲಿ ಅವರ ಕೆಲವು ವರ್ತನೆಗಳು ಪೋಷಕರಲ್ಲಿ ಆತಂಕ ಉಂಟುಮಾಡಬಹುದು. ಅದರಲ್ಲೂ, ಮಗು ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ “ಯಾವುದಾದರೂ ತಪ್ಪು ಅಭ್ಯಾಸ ಬೆಳೆಸಿಕೊಂಡಿದ್ದಾರೆಯೇ?” ಎಂಬ ಅನುಮಾನ ಹಲವರಿಗೆ ಬರುತ್ತದೆ. ಆದರೆ ಮನೋವೈದ್ಯರು ಹೇಳುವಂತೆ, ಇಂತಹ ಸಂದರ್ಭಗಳಲ್ಲಿ ಆತಂಕ ಅಥವಾ ಗದರಿಕೆಗಿಂತ ತಿಳುವಳಿಕೆಯಿಂದ ನಡೆದುಕೊಳ್ಳುವುದು ಅತ್ಯಂತ ಮುಖ್ಯ.
ಇತ್ತೀಚೆಗೆ ಒಬ್ಬ ತಾಯಿ ತಮ್ಮ 9 ವರ್ಷದ ಮಗ ಬಾತ್‌ರೂಮ್‌ನಲ್ಲಿ ತುಂಬಾ ಹೊತ್ತು ಕಳೆಯುತ್ತಾನೆ ಎಂದು ಮನೋವೈದ್ಯೆ ಕೋಮಲ್ ಬಕ್ಷಿ ಅವರ ಬಳಿ ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮಕ್ಕಳು 8-9 ವರ್ಷದ ವಯಸ್ಸಿನಿಂದ ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕುತೂಹಲ ಹೊಂದುವುದು ಸಹಜ ಎಂದು ಹೇಳಿದ್ದಾರೆ. ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ದೇಹವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇದನ್ನು “ಕೆಟ್ಟ ಅಭ್ಯಾಸ” ಎಂದು ಪರಿಗಣಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ತಜ್ಞರ ಪ್ರಕಾರ, ದೇಹದ ಬಗ್ಗೆ ಕುತೂಹಲ ಇರುವುದು ಹುಡುಗರಲ್ಲಷ್ಟೇ ಅಲ್ಲ, ಹುಡುಗಿಯರಲ್ಲಿಯೂ ಸಾಮಾನ್ಯ. ತಮ್ಮ ದೇಹದ ರಚನೆ, ಬೆಳವಣಿಗೆ ಮತ್ತು ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳನ್ನು ಬೈಯಿವುದು, ಗದರಿಸುವುದು ಅಥವಾ “ಇದು ತಪ್ಪು” ಎಂದು ಭಯ ಹುಟ್ಟಿಸುವುದು ಅವರ ಮಾನಸಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇಂತಹ ಸಂದರ್ಭಗಳಲ್ಲಿ ಪೋಷಕರು ಮಾಡಬೇಕಾದ ಮೊದಲ ಕೆಲಸ ಎಂದರೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು. ದೇಹದಲ್ಲಿ ಆಗುವ ಬದಲಾವಣೆಗಳು ಸಹಜ ಎಂಬುದನ್ನು ಅವರ ವಯಸ್ಸಿಗೆ ತಕ್ಕ ಸರಳ ಭಾಷೆಯಲ್ಲಿ ವಿವರಿಸಬೇಕು. ಮಕ್ಕಳು ಯಾವುದೇ ಪ್ರಶ್ನೆ ಕೇಳಲು ಹಿಂಜರಿಯದಂತಹ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು. ಹೀಗೆ ಮಾಡಿದರೆ ಅವರು ತಪ್ಪು ಮಾಹಿತಿಯಿಂದ ದೂರವಿರುತ್ತಾರೆ ಮತ್ತು ದೇಹದ ಬಗ್ಗೆ ಆರೋಗ್ಯಕರ ತಿಳುವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ.
ಸಂಪೂರ್ಣ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:
ಇದರ ಜೊತೆಗೆ, ಇಂಟರ್ನೆಟ್‌ನಲ್ಲಿ ಲಭ್ಯವಿರುವ ಅಶ್ಲೀಲ ಅಥವಾ ವಯಸ್ಸಿಗೆ ಸೂಕ್ತವಲ್ಲದ ವಿಷಯಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಡಬೇಕು. ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಯ ಮೇಲೆ ಸೂಕ್ತ ನಿಗಾ ಇರಿಸುವುದೂ ಅಗತ್ಯ. ಆದರೆ ಇದು ಮಕ್ಕಳ ಖಾಸಗಿತನಕ್ಕೆ ಧಕ್ಕೆಯಾಗದ ರೀತಿಯಲ್ಲಿರಬೇಕು ಎಂದು ತಜ್ಞರು ಸೂಚಿಸುತ್ತಾರೆ.
ಹೊಳೆಯುವ ತ್ವಚೆ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ತಪ್ಪದೇ ಈ ಕಾರ್ಯಗಳನ್ನು ಮಾಡಿ
ಮಕ್ಕಳು ದಿನವಿಡೀ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಆಟ, ಕ್ರೀಡೆ, ಓದು, ಹವ್ಯಾಸಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರತರಾಗಿದ್ದರೆ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಉತ್ತಮವಾಗಿರುತ್ತದೆ.
ಅತ್ಯಂತ ಮುಖ್ಯವಾಗಿ, ಮಗು ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆದಿದೆ ಎಂಬ ಕಾರಣಕ್ಕೆ ಅವನನ್ನು ಅಥವಾ ಅವಳನ್ನು ವಿಚಾರಣೆ ಮಾಡುವುದು, ನಾಚಿಕೆಪಡಿಸುವುದು ಅಥವಾ ಹಾಸ್ಯ ಮಾಡುವುದು ತಪ್ಪು. ಇಂತಹ ವರ್ತನೆಯಿಂದ ಮಕ್ಕಳು ಪೋಷಕರಿಂದ ದೂರವಾಗುವ ಸಾಧ್ಯತೆ ಇದೆ. ಬದಲಿಗೆ, ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ವಿಶ್ವಾಸದೊಂದಿಗೆ ಮಾತನಾಡಿದರೆ, ಬೆಳವಣಿಗೆಯ ಈ ಹಂತವನ್ನು ಅವರು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದು ಮನೋವೈದ್ಯರು ಸಲಹೆ ನೀಡಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:27 pm, Wed, 15 July 26
