ಪುಣೆ, ಜೂನ್ 24: ನನ್ನ ಹೃದಯ(Heart)ಕ್ಕೆ ಕೊನೆಗೂ ಒಂದು ಗೂಡು ಸಿಕ್ಕಿ ಸಿಕ್ಕಿದೆ ಎಂದು ಸಿಯಾ ತನ್ನ ನಿಶ್ಚಿತ ವರನನ್ನು ಕೊಲ್ಲುವುದಕ್ಕೂ ಮುನ್ನ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಅಪ್‌ಲೋಡ್ ಮಾಡಿದ್ದಳು. ತನ್ನ ಭಾವಿ ಪತಿ ಕೇತನ್ ಅಗರ್ವಾಲ್‌ನನ್ನು ಟ್ಯಾಗ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಳು. ಜೋಡಿಯ ಇನ್‌ಸ್ಟಾಗ್ರಾಂ ಪ್ರೊಫೈಲ್ ತುಂಬಾ ಸುಂದರ ಚಿತ್ರಗಳೇ ತುಂಬಿದ್ದವು. ಆದರೆ, ಈ ಸುಂದರ ಪೋಸ್ಟ್‌ಗಳ ಹಿಂದೆ ತನ್ನ ಭಾವಿ ಪತಿಯನ್ನೇ ಮುಗಿಸಲು ಆಕೆ ಭೀಕರ ಸ್ಕೆಚ್ ಹಾಕುತ್ತಿದ್ದಳು ಎಂಬ ಸತ್ಯ ಈಗ ಬಯಲಾಗಿದೆ.
ಫೆಬ್ರವರಿಯಲ್ಲಿ ಇಬ್ಬರ ನಿಶ್ಚಿತಾರ್ಥವಾಗಿತ್ತು, ಮೇ ತಿಂಗಳ ಪೋಸ್ಟ್ ಒಂದರಲ್ಲಿ ಕೇತನ್ ತನಗೆ ಹೂವು ನೀಡುತ್ತಿರುವುದನ್ನು ಹಂಚಿಕೊಂಡಿದ್ದಳು. ಮೇ 19 ರಂದು ತನ್ನ ಹುಟ್ಟುಹಬ್ಬದ ಕೌಂಟ್‌ಡೌನ್ ಎಂದು ಬರೆದು ಕೇತನ್ ಜೊತೆ ರೊಮ್ಯಾಂಟಿಕ್ ಹಾಡಿಗೆ ನೃತ್ಯ ಮಾಡುವ ವಿಡಿಯೋ ಅಪ್‌ಲೋಡ್ ಮಾಡಿದ್ದಳು.
ಆದರೆ, ಈ ಪೋಸ್ಟ್ ಹಾಕಿದ ಕೇವಲ ಒಂದು ತಿಂಗಳಲ್ಲೇ ಅಂದರೆ ಜೂನ್ 18 ರಂದು ತನ್ನ ಹುಟ್ಟುಹಬ್ಬಕ್ಕೆ ಸರಿಯಾಗಿ ಒಂದು ದಿನ ಮುಂಚೆ ಅದೇ ಭಾವಿ ಪತಿಯನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಿದ್ದಾಳೆ. ಕೇತನ್‌ನನ್ನು ಮದುವೆಯಾಗಲು ಸಿಯಾಳಿಗೆ ಇಷ್ಟವಿರಲಿಲ್ಲ. ಆಕೆಗೆ ತನ್ನ ಬಿಸಿನೆಸ್ ಪಾರ್ಟ್‌ನರ್, ಒಣಹಣ್ಣುಗಳ ವ್ಯಾಪಾರಿ ಚೇತನ್ ಚೌಧರಿ ಜೊತೆ ಅಕ್ರಮ ಸಂಬಂಧವಿತ್ತು.
238 ಗಂಟೆಗಳ ಕಾಲ ಸಂಚು
ಪೊಲೀಸರ ತನಿಖೆಯ ಪ್ರಕಾರ, ಸಿಯಾ ಮತ್ತು ಚೇತನ್ ಕಳೆದ 7 ತಿಂಗಳಲ್ಲಿ ಬರೋಬ್ಬರಿ 2,004 ಬಾರಿ ಫೋನ್‌ನಲ್ಲಿ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಸಂಚು ರೂಪಿಸಿದ್ದಾರೆ. ಇಬ್ಬರ ಕುಟುಂಬಗಳು ಮದುವೆ ಸಿದ್ಧತೆ ಮಾಡುತ್ತಿದ್ದಾಗಲೇ ಇವರಿಬ್ಬರು ಕೇತನ್‌ನನ್ನು ಕೊಲ್ಲಲು ಸ್ಕೆಚ್ ಹಾಕುತ್ತಿದ್ದರು.
ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ
ಮೃತನ ತಂದೆ ವಿಶಾಲ್ ಅಗರ್ವಾಲ್ ನೀಡಿರುವ ಹೇಳಿಕೆಯ ಪ್ರಕಾರ, ಸಿಯಾ ಹಂತ ಹಂತವಾಗಿ ಕೇತನ್‌ನನ್ನು ಮುಗಿಸಲು ಪ್ಲಾನ್ ಮಾಡಿದ್ದಳು. ಜೂನ್ 6 ರಂದು ಈ ಜೋಡಿ ಪ್ರಿ-ವೆಡ್ಡಿಂಗ್ ಶೂಟಿಂಗ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ಹೋಗಬೇಕಿತ್ತು. ಕಾರಿನಲ್ಲಿ ಹೋಗುವಾಗ ಎಲ್ಲರ ಪಾಸ್‌ಪೋರ್ಟ್‌ಗಳನ್ನು ಒಂದೇ ಪೌಚ್‌ನಲ್ಲಿ ಇಡಲಾಗಿತ್ತು. ದಾರಿಯಲ್ಲಿ ಫುಡ್ ಮಾಲ್ ಹತ್ತಿರ ನಿಲ್ಲಿಸಿದಾಗ ಸಿಯಾ ತನ್ನ ಮೊಬೈಲ್ ಮರೆತಿದ್ದೇನೆ ಎಂದು ಹೇಳಿ ಕಾರಿಗೆ ಒಂಟಿಯಾಗಿ ಮರಳಿದ್ದಳು. ವಿಮಾನ ನಿಲ್ದಾಣಕ್ಕೆ ತಲುಪಿದಾಗ ಕೇತನ್ ಪಾಸ್‌ಪೋರ್ಟ್ ಮಾತ್ರ ನಾಪತ್ತೆಯಾಗಿತ್ತು, ಇದರಿಂದ ಪ್ರವಾಸ ರದ್ದಾಗಿ ಅವರು ಮನೆಗೆ ಮರಳಬೇಕಾಯಿತು.
ಪ್ಲಾನ್ ಬಿ ವಿಫಲ: ಹಾವಿನ ನಾಟಕವಾಡಿದ್ದ ಕಿಲ್ಲರ್
ಜೂನ್ 14 ರಂದು ಸಿಯಾ ಜಗಳವಾಡಿ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದೊಯ್ದಳು. ಅಲ್ಲಿ ಆತನನ್ನು ಮೊದಲ ಬಾರಿಗೆ ಬೆಟ್ಟದಿಂದ ಕೆಳಗೆ ತಳ್ಳಿದ್ದಳು. ಆದರೆ ಕೇತನ್ ಅದೃಷ್ಟವಶಾತ್ ಪೊದೆಯೊಂದನ್ನು ಹಿಡಿದು ಬದುಕುಳಿದಿದ್ದರು. ತಕ್ಷಣವೇ ಸಿಯಾ, ಹಾವು ಹಾವು ಎಂದು ಜೋರಾಗಿ ಕಿರುಚುತ್ತಾ ಓಡಿಹೋಗಿ ಆತನನ್ನು ಅಪ್ಪಿಕೊಂಡು ಗೊಂದಲ ಸೃಷ್ಟಿಸಿ ತನ್ನ ತಪ್ಪು ಮುಚ್ಚಿಹಾಕಿದ್ದಳು.
ಜೂನ್ 18 ರಂದು ಸಿಯಾ ಮತ್ತೆ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆತಂಡಿದ್ದಳು. ಈ ಬಾರಿ ಆಕೆಯ ಪ್ರಿಯಕರ ಚೇತನ್ ಚೌಧರಿ ತನ್ನ ಗುರುತು ಸಿಗದಿರಲು ಹೂಡಿ ಧರಿಸಿ ಸಿಸಿಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸುತ್ತಾ ಇವರನ್ನು ಹಿಂಬಾಲಿಸಿದ್ದಾನೆ.
ಕೋಟೆಯ ತುದಿಗೆ ತಲುಪಿದಾಗ ಇಬ್ಬರೂ ಸೇರಿ ಕೇತನ್‌ನನ್ನು ಕಮರಿಗೆ ತಳ್ಳಿದ್ದಾರೆ. ಆರಂಭದಲ್ಲಿ ಫೋಟೋ ತೆಗೆಯುವಾಗ ಬಿದ್ದಿದ್ದಾನೆ ಎಂದು ಸಿಯಾ ಕಥೆ ಕಟ್ಟಿದ್ದಳು. ಆದರೆ ಆಕೆಯ ಮುಖದಲ್ಲಿ ಯಾವುದೇ ದುಃಖ ಇಲ್ಲದ್ದನ್ನು ಕಂಡು ಪೊಲೀಸರು ತನಿಖೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ನವೆಂಬರ್‌ನಲ್ಲಿ ನಡೆಯಬೇಕಿದ್ದ ಈ ಅದ್ದೂರಿ ಮದುವೆಗಾಗಿ ಜೈಪುರದಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಅರಮನೆಯನ್ನು ಬುಕ್ ಮಾಡಲಾಗಿತ್ತು. ಅತಿಥಿಗಳನ್ನು ಕರೆದೊಯ್ಯಲು ಎರಡು ವಿಶೇಷ ಖಾಸಗಿ ಜೆಟ್ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಎರಡೂ ಕುಟುಂಬಗಳು ಸಕಲ ಸಿದ್ಧತೆಯಲ್ಲಿದ್ದಾಗ ನಡೆದಿರುವ ಈ ಭೀಕರ ಹತ್ಯೆ ಮತ್ತು ಇನ್‌ಸ್ಟಾಗ್ರಾಮ್ ಸ್ಟಾರ್ ಯುವತಿಯ ಕ್ರೂರ ಮುಖ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಸದ್ಯ ಸಿಯಾ ಮತ್ತು ಚೇತನ್ 7 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 10:12 am, Wed, 24 June 26
